LatestTop Storiesಬೆಂಗಳೂರು-Bengaluruರಾಜ್ಯ-Karnataka

ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್..!

ಬೆಂಗಳೂರು.ಸೆ.30- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ನೀಡಲಾಗುತ್ತಿರುವ ಉಚಿತ ಬಸ್ ಪ್ರಯಾಣ ಸೌಲಭ್ಯವನ್ನು ಅರ್ಹ ಫಲಾನುಭವಿಗಳಿಗೆ ಮಾತ್ರ ತಲುಪಿಸುವ ಉದ್ದೇಶದಿಂದ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ಶಕ್ತಿ ಯೋಜನೆಯ ದುರ್ಬಳಕೆ ತಡೆಯುವುದು ಹಾಗೂ ನಕಲಿ ಗುರುತಿನ ದಾಖಲೆಗಳ ಮೂಲಕ ಉಚಿತ ಪ್ರಯಾಣ ಮಾಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಸುಮಾರು ಒಂದು ಕೋಟಿ ಮಹಿಳೆಯರಿಗೆ ಸ್ಮಾರ್ಟ್ ಕಾರ್ಡ್ ವಿತರಿಸಲು ಸರ್ಕಾರ 250 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದೆ.

ಮೊದಲ ಹಂತದಲ್ಲಿ ಬಿಎಂಟಿಸಿಯಲ್ಲಿ ಜಾರಿ:

ಸ್ಮಾರ್ಟ್ ಕಾರ್ಡ್ ವಿತರಣೆ ಪ್ರಾಯೋಗಿಕವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯಲ್ಲಿ ಆರಂಭವಾಗಲಿದ್ದು, ಬಳಿಕ ರಾಜ್ಯದ ಇತರ ಸಾರಿಗೆ ನಿಗಮಗಳಿಗೂ ವಿಸ್ತರಿಸುವ ಯೋಜನೆ ಇದೆ.

ಕಾರ್ಡ್ ಪಡೆಯಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯಂತಹ ದಾಖಲೆಗಳನ್ನು ಸಲ್ಲಿಸಬೇಕಾಗಬಹುದು. ಸ್ಮಾರ್ಟ್ ಕಾರ್ಡ್ ಮೂಲಕ ಮಹಿಳಾ ಪ್ರಯಾಣಿಕರ ಗುರುತನ್ನು ಪರಿಶೀಲಿಸಿ, ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ವ್ಯವಸ್ಥೆ ರೂಪಿಸಲಾಗುತ್ತಿದೆ.

ಅನ್ಯ ರಾಜ್ಯದ ಪ್ರಯಾಣಿಕರಿಗೆ ಕಡಿವಾಣ:

ಪ್ರಸ್ತುತ ಗುರುತಿನ ದಾಖಲೆ ಆಧರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುತ್ತಿರುವುದರಿಂದ ಬೇರೆ ರಾಜ್ಯದ ಮಹಿಳೆಯರು ಸೌಲಭ್ಯ ಪಡೆಯುತ್ತಿರುವ ಸಾಧ್ಯತೆ ಇದೆ. ಇದನ್ನು ನಿಯಂತ್ರಿಸಿ ಕರ್ನಾಟಕದ ಅರ್ಹ ಮಹಿಳೆಯರಿಗೆ ಮಾತ್ರ ಶಕ್ತಿ ಯೋಜನೆಯ ಸೌಲಭ್ಯ ಒದಗಿಸುವುದು ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯ ಪ್ರಮುಖ ಉದ್ದೇಶವಾಗಿದೆ.

ಮೆಟ್ರೋ ಬಳಕೆಯ ಬಗ್ಗೆಯೂ ಪ್ರಸ್ತಾವ:

ಸ್ಮಾರ್ಟ್ ಕಾರ್ಡ್ ಅನ್ನು ಬಸ್ ಪ್ರಯಾಣದ ಜತೆಗೆ ನಮ್ಮ ಮೆಟ್ರೋ ಸೇವೆಯಲ್ಲೂ ಬಳಸುವ ಅವಕಾಶ ಕಲ್ಪಿಸುವ ಪ್ರಸ್ತಾವವಿದೆ.ಈ ಕುರಿತು ಅಂತಿಮ ನಿರ್ಧಾರ ಮತ್ತು ಅನುಷ್ಠಾನದ ರೂಪುರೇಷೆಗಳು ಸರ್ಕಾರದ ಮುಂದಿನ ಕ್ರಮಗಳ ಬಳಿಕ ಸ್ಪಷ್ಟವಾಗಬೇಕಿದೆ.

ಬಿಎಂಟಿಸಿಯಲ್ಲಿ ಈಗಾಗಲೇ ಸುಮಾರು 11 ಸಾವಿರ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆಯಲಾಗಿದ್ದು, ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ಇವುಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

ಶಕ್ತಿ ಯೋಜನೆಯ ಸೌಲಭ್ಯವನ್ನು ಅರ್ಹರಿಗೆ ಮಾತ್ರ ತಲುಪಿಸುವ ಜತೆಗೆ, ಸಾರಿಗೆ ನಿಗಮಗಳ ಮೇಲಿನ ಆರ್ಥಿಕ ಹೊರೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

Share with Friends
author avatar
Digital Desk