
ರೇಣುಕಾಸ್ವಾಮಿ ಕೊಲೆ ಕೇಸ್ನ ಮಾಫಿ ಸಾಕ್ಷಿ ವಿಚಾರಣೆ
ಬೆಂಗಳೂರು.ಸೆ.29 – ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಸಿಟಿ ಸಿವಿಲ್ ಕೋರ್ಟ್ನಲ್ಲಿ ಇಂದು ವಿಚಾರಣೆ ಮುಂದುವರಿದಿದ್ದು,ಆರೋಪಿ ಪ್ರದೋಷ್ ಹೇಳಿಕೆಯನ್ನು ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ನಲ್ಲಿ ದಾಖಲಿಸುವ ಪ್ರಕ್ರಿಯೆ ನಡೆಯಿತು.
ಭದ್ರತೆಯೊಂದಿಗೆ ಕೋರ್ಟ್ಗೆ ಹಾಜರಾದ ಪ್ರದೋಷ್, ಪ್ರಕರಣಕ್ಕೆ ಸಂಬಂಧಿಸಿದ ಹಲವು ಘಟನೆಗಳ ಬಗ್ಗೆ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ್ದಾರೆ. ದರ್ಶನ್ ಪರ ವಕೀಲರು ಅರ್ಜಿ ವಿಚಾರಣೆಯನ್ನು ಮುಂದೂಡುವಂತೆ ಮನವಿ ಮಾಡಿದರು. ಇದಕ್ಕೆ ವಿಶೇಷ ಸರ್ಕಾರಿ ಅಭಿಯೋಜಕ (ಎಸ್ಪಿಪಿ)ಪ್ರಸನ್ನಕುಮಾರ್ ಆಕ್ಷೇಪ ವ್ಯಕ್ತಪಡಿಸಿದರು. ಆರೋಪಿಗಳ ಪರ ವಕೀಲರೂ ತ್ವರಿತ ವಿಚಾರಣೆಗೆ ಸಹಕರಿಸಬೇಕು ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿರುವುದಾಗಿ ಅವರು ನ್ಯಾಯಾಲಯದ ಗಮನಕ್ಕೆ ತಂದರು.
ನಂತರ ಕೆಲಕಾಲ ಅರ್ಜಿ ವಿಚಾರಣೆ ನಡೆದ ಬಳಿಕ, ಇನ್ ಕ್ಯಾಮೆರಾ ಪ್ರೊಸಿಡಿಂಗ್ಸ್ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ವಕೀಲರನ್ನು ಹೊರತುಪಡಿಸಿ ಉಳಿದವರು ಕೋರ್ಟ್ನಿಂದ ಹೊರಹೋಗುವಂತೆ ನ್ಯಾಯಾಧೀಶರು ಸೂಚಿಸಿದರು. ಬಳಿಕ ಬಾಗಿಲು ಮುಚ್ಚಿ ವಿಚಾರಣೆ ಮುಂದುವರಿಸಲಾಯಿತು.
ದರ್ಶನ್ ಪರಿಚಯದ ಬಗ್ಗೆ ಹೇಳಿಕೆ:
2003ರಲ್ಲಿ ಕ್ರಿಕೆಟ್ ಆಡಲು ಹೋಗುತ್ತಿದ್ದ ಸಂದರ್ಭದಲ್ಲಿ ದರ್ಶನ್ ಅವರ ಪರಿಚಯವಾಯಿತು.ಕಾಲಕ್ರಮೇಣ ಇಬ್ಬರೂ ಆತ್ಮೀಯ ಸ್ನೇಹಿತರಾದರು ಎಂದು ಪ್ರದೋಷ್ ಹೇಳಿಕೆ ನೀಡಿದ್ದಾರೆ.
ಕಾರ್ಪೊರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವುದರಿಂದ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಈ ವೇಳೆ ದರ್ಶನ್ ಅವರನ್ನು ಭೇಟಿಯಾಗುತ್ತಿದ್ದೆ. ಕಾರ್ಯಕ್ರಮಗಳಿದ್ದಾಗ ಅವರ ಮನೆಗೂ ಹೋಗುತ್ತಿದ್ದೆ ಎಂದು ಅವರು ತಿಳಿಸಿದ್ದಾರೆ.
2024ರ ಜೂನ್ 8ರಂದು ಶನಿವಾರ ರಜೆ ಇದ್ದ ಕಾರಣ ಗಿರಿನಗರದ ಮನೆಯಿಂದ ಬೈಕ್ನಲ್ಲಿ ದರ್ಶನ್ ಅವರ ಐಡಿಯಲ್ ಹೋಮ್ಸ್ನ ಮನೆಗೆ ತೆರಳಿದ್ದೆ. ಆಗ ದರ್ಶನ್ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿದ್ದರು. ಅವರ ತರಬೇತುದಾರ ಹೇಮಂತ್ ಕೂಡ ಅಲ್ಲಿದ್ದರು ಎಂದು ಪ್ರದೋಷ್ ಹೇಳಿದ್ದಾರೆ.
ದರ್ಶನ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ ಬಳಿಕ ಅವರ ಶೂಟಿಂಗ್ ಬಗ್ಗೆ ಸುಮಾರು 15 ನಿಮಿಷ ಮಾತನಾಡಿದ್ದೆ.ಮಗಳನ್ನು ಸ್ವಿಮ್ಮಿಂಗ್ಗೆ ಕರೆದುಕೊಂಡು ಹೋಗಬೇಕಿರುವುದರಿಂದ ಮನೆಗೆ ತೆರಳುವುದಾಗಿ ತಿಳಿಸಿದ್ದೆ. ಆದರೆ, ಮಧ್ಯಾಹ್ನ ವಿನಯ್ ಅವರ ಸ್ಟೋನಿ ಬ್ರೂಕ್ನಲ್ಲಿ ಸಣ್ಣ ಪಾರ್ಟಿ ಇದೆ, ಬರುವಂತೆ ದರ್ಶನ್ ಒತ್ತಾಯಿಸಿದರು ಎಂದು ಹೇಳಿದ್ದಾರೆ.
ಸ್ಟೋನಿ ಬ್ರೂಕ್ಗೆ ತೆರಳಿದ ತಂಡ :
ನಾನು ಸುಸ್ತಾಗಿದ್ದೇನೆ, ಬರಲು ಸಾಧ್ಯವಿಲ್ಲ ಎಂದು ಹೇಳಿದರೂ ದರ್ಶನ್ ಒತ್ತಾಯಿಸಿದ ಹಿನ್ನೆಲೆಯಲ್ಲಿ ಪಾರ್ಟಿಗೆ ತೆರಳಲು ಒಪ್ಪಿಕೊಂಡೆ.ನಂತರ ಮನೆಗೆ ತೆರಳಿ ಬಟ್ಟೆ ಬದಲಿಸಿಕೊಂಡು ಸ್ಕಾರ್ಪಿಯೋ ಕಾರಿನಲ್ಲಿ ದರ್ಶನ್ ಅವರ ಮನೆಗೆ ಮಧ್ಯಾಹ್ನ ಸುಮಾರು 12.30ಕ್ಕೆ ಬಂದೆ ಎಂದು ಪ್ರದೋಷ್ ಹೇಳಿದ್ದಾರೆ.
ನಟ ದರ್ಶನ್ ಮನೆಯಿಂದ ನಾಗರಾಜ್ ಕೂಡ ಕಾರಿನಲ್ಲಿ ಸೇರಿಕೊಂಡರು.ಅಲ್ಲಿಂದ ಆರ್.ಆರ್.ನಗರದಲ್ಲಿರುವ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿ,ಕಾರಿನಲ್ಲೇ ದರ್ಶನ ಪಡೆದ ಬಳಿಕ ಸ್ಟೋನಿ ಬ್ರೂಕ್ ರೆಸ್ಟೋರೆಂಟ್ಗೆ ತೆರಳಿದ್ದೆವು ಎಂದು ತಿಳಿಸಿದ್ದಾರೆ.
ರೆಸ್ಟೋರೆಂಟ್ಗೆ ಸುಮಾರು 1.30ರ ವೇಳೆಗೆ ತಲುಪಿದ್ದೆವು. ಅಲ್ಲಿ ಯಶಸ್ ಸೂರ್ಯ ಇದ್ದರು. ಮತ್ತೊಂದು ಸ್ಕಾರ್ಪಿಯೋ ಹಾಗೂ ಫೋರ್ಡ್ ಎಂಡೀವರ್ ಕಾರುಗಳು ನಮ್ಮ ಕಾರನ್ನು ಹಿಂಬಾಲಿಸುತ್ತಿದ್ದವು. ಅವುಗಳಲ್ಲಿ ದರ್ಶನ್ ಅವರ ಪರಿಚಿತರು ಹಾಗೂ ಬಾಡಿಗಾರ್ಡ್ ಇದ್ದರು ಎಂದು ಪ್ರದೋಷ್ ಹೇಳಿದ್ದಾರೆ.
ದರ್ಶನ್, ಪವಿತ್ರಾ ನಡುವೆ ವೀಡಿಯೊ ಕರೆ :
ರೆಸ್ಟೋರೆಂಟ್ನ ಮೊದಲ ಮಹಡಿಯಲ್ಲಿ ದರ್ಶನ್ಗಾಗಿ ವಿಶೇಷವಾಗಿ ಮಾಡಲಾಗಿದ್ದ ಡಿ ಬಾಸ್ ಸಫಾರಿ ಎಂಬ ಸ್ಥಳದಲ್ಲಿ ಎಲ್ಲರೂ ಸೇರಿದ್ದರು.ದರ್ಶನ್, ಯಶಸ್ ಸೂರ್ಯ, ನಾಗರಾಜ್, ವಿನಯ್ ಹಾಗೂ ನಂತರ ಚಿಕ್ಕಣ್ಣ ಕೂಡ ಬಂದಿದ್ದರು. ತಾನು ಮದ್ಯಪಾನ ಮಾಡುವುದಿಲ್ಲದ ಕಾರಣ ಜ್ಯೂಸ್ ತೆಗೆದುಕೊಂಡಿದ್ದೆ ಎಂದು ಪ್ರದೋಷ್ ಹೇಳಿದ್ದಾರೆ.
ಸುಮಾರು 2.30ರ ವೇಳೆಗೆ ದರ್ಶನ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಪವನ್ ಅಲ್ಲಿಗೆ ಬಂದರು.ದರ್ಶನ್ ಮತ್ತು ವಿನಯ್ ಬಳಿ ತೆರಳಿ ಮೊಬೈಲ್ನಲ್ಲಿದ್ದ ಫೋಟೊವೊಂದನ್ನು ತೋರಿಸಿದರು.ಬಳಿಕ ಪವನ್, ಪವಿತ್ರಾ ಗೌಡ ಅವರಿಗೆ ವಾಟ್ಸ್ಪ್ ವೀಡಿಯೊ ಕಾಲ್ ಮಾಡಿದರು ಎಂದು ಪ್ರದೋಷ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವೀಡಿಯೊ ಕರೆಯಲ್ಲಿ ದರ್ಶನ್ ಪವಿತ್ರಾ ಗೌಡ ಜೊತೆ ಮಾತನಾಡಿದರು.ನೀನು ಅಳಬೇಡ, ನಾನಿದ್ದೀನಿ ಎಂದು ಹೇಳಿದ್ದಲ್ಲದೆ, ರೆಸ್ಟೋರೆಂಟ್ನಿಂದ ಊಟ ಕಳುಹಿಸುವುದಾಗಿ ತಿಳಿಸಿದರು ಎಂದು ಪ್ರದೋಷ್ ಹೇಳಿದ್ದಾರೆ.
ಪವಿತ್ರಾ ಮನೆಗೆ ತೆರಳಿದ ದರ್ಶನ್:
ಊಟ ಮುಗಿಸಿದ ಬಳಿಕ ಎಲ್ಲರೂ ಹೊರಡಲು ಸಿದ್ಧರಾದಾಗ, ದರ್ಶನ್,ತಮಗೂ ವಿನಯ್ಗೂ ಸ್ವಲ್ಪ ಕೆಲಸವಿದೆ ಎಂದು ಹೇಳಿದ್ದರು. ಬಳಿಕ ಪ್ರದೋಷ್ ಅವರ ಕಾರಿನಲ್ಲಿ ತೆರಳಲು ದರ್ಶನ್ ಸೂಚಿಸಿದರು.
ವಿಷ್ಣುವರ್ಧನ್ ಸಮಾಧಿ ರಸ್ತೆಯಲ್ಲಿ ಸಾಗುತ್ತಿದ್ದಾಗ ಬಾಡಿಗಾರ್ಡ್ನ್ನು ಅವರ ಮನೆಗೆ ತೆರಳುವಂತೆ ದರ್ಶನ್ ಸೂಚಿಸಿದರು. ನಂತರ ಎಲ್ಲಿಗೆ ಹೋಗಬೇಕು ಎಂದು ಕೇಳಿದಾಗ ಪವಿತ್ರಾ ಗೌಡ ಮನೆಗೆ ತೆರಳಬೇಕು ಎಂದು ದರ್ಶನ್ ತಿಳಿಸಿದರು ಎಂದು ಪ್ರದೋಷ್ ಹೇಳಿದ್ದಾರೆ.
ಮಧ್ಯಾಹ್ನ ಸುಮಾರು 3ರಿಂದ 4 ಗಂಟೆಯ ವೇಳೆಗೆ ಪವಿತ್ರಾ ಗೌಡ ಮನೆಗೆ ತೆರಳಿದ್ದೆವು. ಪವಿತ್ರಾ ಗೌಡ ಕಾರಿನ ಬಳಿಗೆ ಬಂದ ಬಳಿಕ ದರ್ಶನ್ ಮತ್ತು ಪವಿತ್ರಾ ಗೌಡ ಹಿಂದಿನ ಸೀಟ್ನಲ್ಲಿ ಕುಳಿತುಕೊಂಡರು ಎಂದು ಪ್ರದೋಷ್ ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ.
