
ಅಕ್ಕಿ ಬೆಲೆ ಏರಿಕೆ: ಕರ್ನಾಟಕಕ್ಕೆ ಮೂರನೇ ಸ್ಥಾನ
ಬೆಂಗಳೂರು.ಸೆ.28– ರಾಜ್ಯದಲ್ಲಿ ಅಕ್ಕಿ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು,ಗ್ರಾಹಕರ ಜೇಬಿಗೆ ಮತ್ತಷ್ಟು ಹೊರೆ ಬಿದ್ದಿದೆ.
ಜುಲೈನಿಂದ ಸೆಪ್ಟೆಂಬರ್‌ವರೆಗೆ ಅಕ್ಕಿಯ ಬೆಲೆ ಕೆಜಿಗೆ 7.30ರಷ್ಟು ಹೆಚ್ಚಳವಾಗಿದ್ದು, ಸೆಪ್ಟೆಂಬರ್‌ನಲ್ಲಿ ರಾಜ್ಯದ ಸರಾಸರಿ ಬೆಲೆ ಕೆಜಿಗೆ 63.70ಕ್ಕೆ ತಲುಪಿದೆ.
ಅಕ್ಕಿ ಬೆಲೆ ಏರಿಕೆಯ ಪ್ರಮಾಣದಲ್ಲಿ ಕರ್ನಾಟಕ ದೇಶದಲ್ಲೇ ಮೂರನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮೂರು ತಿಂಗಳ ಅವಧಿಯಲ್ಲಿ ಅಕ್ಕಿ ಬೆಲೆ ಶೇ.12.94ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ತ್ರಿಪುರಾದಲ್ಲಿ ಶೇ.17.33 ಹಾಗೂ ತೆಲಂಗಾಣದಲ್ಲಿ ಶೇ.13.32ರಷ್ಟು ಏರಿಕೆ ದಾಖಲಾಗಿದೆ.
ತೆಲಂಗಾಣದಲ್ಲಿ ಮೂರು ತಿಂಗಳಲ್ಲಿ ಅಕ್ಕಿ ಬೆಲೆ ಕೆಜಿಗೆ 7.20ರಷ್ಟು ಹೆಚ್ಚಾಗಿದ್ದರೆ, ಗೋವಾದಲ್ಲಿ 6.50 ಹಾಗೂ ಆಂಧ್ರಪ್ರದೇಶದಲ್ಲಿ 5.40ರಷ್ಟು ಏರಿಕೆಯಾಗಿದೆ.
ಇನ್ನು ಮಹಾರಾಷ್ಟ್ರಕ್ಕೆ ಹೋಲಿಸಿದರೆಕರ್ನಾಟಕದಲ್ಲಿ ಅಕ್ಕಿ ಬೆಲೆ ಕೆಜಿಗೆ 13.50ರಷ್ಟು ಹೆಚ್ಚಿದ್ದು, ಛತ್ತೀಸ್‌ಗಢಕ್ಕೆ ಹೋಲಿಸಿದಾಗ ರಾಜ್ಯದಲ್ಲಿ ಕೆಜಿಗೆ 23.80ರಷ್ಟು ಹೆಚ್ಚಿನ ಬೆಲೆ ಇದೆ.
ಅಕ್ಕಿ ಸೇರಿದಂತೆ ಒಟ್ಟು 38 ದಿನಸಿ ಸಾಮಗ್ರಿಗಳ ಬೆಲೆಗಳ ಮೇಲೆ ನಿಗಾ ಇರಿಸಲಾಗಿದ್ದು, ದೇಶಾದ್ಯಂತ 575 ಕೇಂದ್ರಗಳಿಂದ ಪ್ರತಿನಿತ್ಯ ದಿನಸಿ ವಸ್ತುಗಳ ಬೆಲೆ ಸಂಗ್ರಹಿಸಲಾಗುತ್ತಿದೆ.
ಬೆಲೆ ಏರಿಕೆಯ ಪರಿಣಾಮವಾಗಿ ಗ್ರಾಹಕರು ಕಡಿಮೆ ಬೆಲೆಯ ಅಕ್ಕಿಯತ್ತ ಮುಖ ಮಾಡುತ್ತಿದ್ದಾರೆ. ಹೆಚ್ಚುತ್ತಿರುವ ಅಕ್ಕಿ ಬೆಲೆ ದಿನಸಿ ಖರ್ಚಿನ ಮೇಲೂ ಪರಿಣಾಮ ಬೀರುತ್ತಿದ್ದು, ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಿದೆ.
