
ಡಿಸ್ಕೌಂಟ್ ಔಷಧ ಮಾರಾಟಕ್ಕೆ ಕಡಿವಾಣ..
ಬೆಂಗಳೂರು.ಸೆ.22- ಶೇ.25ರಿಂದ 30ರವರೆಗೆ ಭಾರಿ ರಿಯಾಯಿತಿ ನೀಡಿ, ಕೆಲವೇ ನಿಮಿಷಗಳಲ್ಲಿ ಔಷಧಗಳನ್ನು ಮನೆ ಬಾಗಿಲಿಗೆ ತಲುಪಿಸುವ ಆನ್‌ಲೈನ್ ಔಷಧ ಮಾರಾಟ ವ್ಯವಸ್ಥೆಯ ಮೇಲೆ ಔಷಧ ನಿಯಂತ್ರಣ ಇಲಾಖೆ ನಿಗಾ ವಹಿಸಿದೆ. ಔಷಧಗಳ ಗುಣಮಟ್ಟ ಹಾಗೂ ನಿಯಮಾನುಸಾರ ಮಾರಾಟ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಔಷಧ ಮಳಿಗೆಗಳು ಮತ್ತುಆನ್‌ಲೈನ್ ಮಾರಾಟ ವ್ಯವಸ್ಥೆಗಳಲ್ಲಿ ತಪಾಸಣೆ ನಡೆಸುವ ಕ್ರಮಕ್ಕೆ ಮುಂದಾಗಿದೆ.
ಔಷಧಗಳ ಗುಣಮಟ್ಟ ಪರಿಶೀಲನೆಯ ಭಾಗವಾಗಿ ವಿವಿಧ ಕಂಪನಿಗಳ ಔಷಧಗಳ ಮಾದರಿಗಳನ್ನು ಯಾದೃಚ್ಛಿಕವಾಗಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸುವ ಸಾಧ್ಯತೆ ಇದೆ. ಔಷಧಗಳ ಗುಣಮಟ್ಟ, ಲೇಬಲಿಂಗ್, ಸಂಗ್ರಹಣೆ, ಮಾರಾಟ ದಾಖಲೆಗಳು ಹಾಗೂ ಪರವಾನಗಿ ಸೇರಿದಂತೆ ಹಲವು ಅಂಶಗಳನ್ನು ಅಧಿಕಾರಿಗಳು ಪರಿಶೀಲಿಸಲಿದ್ದಾರೆ.

ಪ್ರಿಸ್ಕ್ರಿಪ್ಷನ್ ನಿಯಮ ಉಲ್ಲಂಘನೆ ಆರೋಪ:
ಹೆಚ್ , ಹೆಚ್ 1 ಮತ್ತು ಎಕ್ಸ್ ವರ್ಗಕ್ಕೆ ಸೇರಿದ ಹಲವು ಔಷಧಗಳ ಮಾರಾಟಕ್ಕೆ ವೈದ್ಯರ ಪ್ರಿಸ್ಕ್ರಿಪ್ಷನ್ ಅಗತ್ಯವಿದೆ. ಆದರೆ ಆನ್‌ಲೈನ್‌ನಲ್ಲಿ ಔಷಧಗಳನ್ನು ಆರ್ಡರ್ ಮಾಡುವ ಸಂದರ್ಭದಲ್ಲಿ ವೈದ್ಯರ ಸಲಹೆ ಹಾಗೂ ಪ್ರಿಸ್ಕ್ರಿಪ್ಷನ್ ಪರಿಶೀಲನೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ವೈದ್ಯರು ಸೂಚಿಸಿದ ಔಷಧದ ಬದಲಿಗೆ ಪರ್ಯಾಯ ಬ್ರ‍್ಯಾಂಡ್ ಅಥವಾ ಬೇರೆ ಔಷಧವನ್ನು ಗ್ರಾಹಕರಿಗೆ ಸೂಚಿಸುವ ಅಥವಾ ನೀಡುವ ಸಂದರ್ಭಗಳ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ.ವೈದ್ಯರ ಅನುಮತಿ ಇಲ್ಲದೆ ಸೂಚಿಸಲಾದ ಔಷಧ ಬದಲಾಯಿಸುವುದರಿಂದ ಚಿಕಿತ್ಸೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ವಿಚಾರವನ್ನೂ ಪರಿಶೀಲಿಸುವ ನಿರೀಕ್ಷೆಯಿದೆ.
ಭಾರಿ ರಿಯಾಯಿತಿ ಜಾಹೀರಾತುಗಳ ಮೇಲೂ ನಿಗಾ:
ಆನ್‌ಲೈನ್ ಔಷಧ ಮಾರಾಟ ಸಂಸ್ಥೆಗಳು ನೀಡುತ್ತಿರುವ ಭಾರಿ ರಿಯಾಯಿತಿ ಹಾಗೂ ತ್ವರಿತ ಡೆಲಿವರಿ ಕುರಿತ ಜಾಹೀರಾತುಗಳ ಹಿನ್ನೆಲೆಯಲ್ಲಿ ನಿಯಮ ಪಾಲನೆಯ ಬಗ್ಗೆಯೂ ಪ್ರಶ್ನೆಗಳು ಉದ್ಭವಿಸಿವೆ. ಗ್ರಾಹಕರಿಗೆ ಔಷಧ ಮಾರಾಟ ಮಾಡುವಾಗ ನಿಗದಿತ ನಿಯಮಗಳು ಹಾಗೂ ಔಷಧ ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
ತಪಾಸಣೆ ವೇಳೆ ನಿಯಮ ಉಲ್ಲಂಘನೆ ಪತ್ತೆಯಾದಲ್ಲಿ, ಅನ್ವಯಿಸುವ ಔಷಧ ನಿಯಂತ್ರಣ ಕಾನೂನುಗಳ ಅಡಿಯಲ್ಲಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.ಔಷಧಗಳ ಮಾರಾಟದಲ್ಲಿ ರಿಯಾಯಿತಿಗಿಂತ ಗುಣಮಟ್ಟ, ಸುರಕ್ಷತೆ ಹಾಗೂ ವೈದ್ಯರ ಪ್ರಿಸ್ಕ್ರಿಪ್ಷನ್ ಪಾಲನೆಗೆ ಆದ್ಯತೆ ನೀಡಬೇಕೆಂಬುದು ಅಧಿಕಾರಿಗಳ ನಿಲುವಾಗಿದೆ.
