
ಮಳೆಗೆ ಧರೆಗೆ ಉರುಳಿದ ಬೃಹತ್ ಮರ..!
ಬೆಂಗಳೂರು.ಸೆ.22- ರಾಜಾಜಿನಗರದ ಮಂಜುನಾಥ ನಗರದಲ್ಲಿ ಸತತವಾಗಿ ಸುರಿದ ಮಳೆಗೆ ಬೃಹತ್ ಮರವೊಂದು ಧರೆಗೆ ಉರುಳಿದೆ. ಮೋದಿ ಆಸ್ಪತ್ರೆ ಸಮೀಪ ಘಟನೆ ನಡೆದಿದೆ.
ಮರ ಉರುಳಿ ರಸ್ತೆ ಬದಿಯಲ್ಲಿದ್ದ ಪಿಂಗಾಣಿ ಹಾಗೂ ಬಳೆ ಅಂಗಡಿಗಳ ಮೇಲೆ ಬಿದ್ದ ಪರಿಣಾಮ ಅಂಗಡಿಗಳಿಗೆ ಭಾರೀ ಹಾನಿಯಾಗಿದೆ. ಅಂಗಡಿಯಲ್ಲಿದ್ದ ವಸ್ತುಗಳು ಹಾನಿಗೊಳಗಾಗಿದ್ದು, ಮನೆಯ ಕಾಪೌಂಡ್ ಹಾಗೂ ಗ್ರಿಲ್‌ಗೂ ಹಾನಿಯಾಗಿದೆ.
ಮರ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದ್ದು, ವಾಹನ ಸವಾರರು ಹಾಗೂ ಸಾರ್ವಜನಿಕರು ತೊಂದರೆ ಅನುಭವಿಸಿದರು.
ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬಳಿಕ ಮರವನ್ನು ತೆರವುಗೊಳಿಸಿ ರಸ್ತೆ ಬದಿಗೆ ಸ್ಥಳಾಂತರಿಸಲಾಗಿದ್ದು, ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
ಮರ ತೆರವು ಕಾರ್ಯಾಚರಣೆ ವಿಚಾರವಾಗಿ ಸ್ಥಳೀಯರು ಜಿಬಿಎ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
