
ದಸರಾ ಆನೆಗಳಿಗೆ ಎರಡು ಹಂತದ ಪಾದ ಪರೀಕ್ಷೆ
ಮೈಸೂರು.ಸೆ.22- ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಸುರಕ್ಷತೆಗೆ ಅರಣ್ಯ ಇಲಾಖೆ ಹಾಗೂ ಅರಮನೆ ಸಿಬ್ಬಂದಿ ವಿಶೇಷ ನಿಗಾ ವಹಿಸಿದ್ದಾರೆ.
ತಾಲೀಮು ನಡೆಯುವ ಮಾರ್ಗದಲ್ಲಿ ಆನೆಗಳ ಪಾದಗಳಿಗೆ ಮೊಳೆ, ಸೂಜಿ, ಕಬ್ಬಿಣದ ಚೂರು ಸೇರಿದಂತೆ ಲೋಹದ ವಸ್ತುಗಳು ಚುಚ್ಚಿ ಗಾಯವಾಗದಂತೆ ಎರಡು ಹಂತದ ಪಾದ ಪರೀಕ್ಷೆ ಕೈಗೊಳ್ಳಲಾಗುತ್ತಿದೆ.
ಅರಮನೆಯಿಂದ ಬನ್ನಿಮಂಟಪದವರೆಗೆ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಆನೆಗಳಿಗೆ ತಾಲೀಮು ನಡೆಸಲಾಗುತ್ತಿದೆ. ತಾಲೀಮಿನ ಬಳಿಕ ಆನೆಗಳ ಪಾದಗಳನ್ನು ಮೆಟಲ್ ಡಿಟೆಕ್ಟರ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮೂಲಕ ಪರಿಶೀಲಿಸಲಾಗುತ್ತಿದೆ.
ಮೆಟಲ್ ಟ್ರ‍್ಯಾಕ್ ಅಳವಡಿಸಿದ್ದರೂ ಆನೆಗಳ ಪಾದಗಳಿಗೆ ಸಣ್ಣಪುಟ್ಟ ಗಾಯಗಳಾಗುವ ಸಾಧ್ಯತೆ ಇರುವುದರಿಂದ ಹೆಚ್ಚುವರಿ ಮುನ್ನೆಚ್ಚರಿಕೆ ವಹಿಸಲಾಗಿದೆ. ತಾಲೀಮು ಮಾರ್ಗದಲ್ಲಿ ಬಿದ್ದಿರುವ ಮೊಳೆ, ಗುಂಡು, ಸೂಜಿ, ಹೇರ್‌ಪಿನ್, ಬಟ್ಟೆಪಿನ್, ನಟ್, ಬೋಲ್ಟ್ ಸೇರಿದಂತೆ ವಿವಿಧ ಲೋಹದ ವಸ್ತುಗಳನ್ನು ಪತ್ತೆಹಚ್ಚಲು ಮ್ಯಾಗ್ನೆಟ್ ಟ್ರಾಲಿಯನ್ನು ಬಳಸಲಾಗುತ್ತಿದೆ.
ತಾಲೀಮು ಮುಗಿದ ಬಳಿಕ ಜಂಬೋಪಡೆಯ ಪ್ರತಿಯೊಂದು ಆನೆಯ ಪಾದಗಳನ್ನು ಸ್ಕ್ಯಾನ್ ಮಾಡಿ ಪರಿಶೀಲಿಸಲಾಗುತ್ತಿದ್ದು, ಲೋಹದ ವಸ್ತುಗಳು ಪಾದಕ್ಕೆ ಚುಚ್ಚಿರುವುದು ಕಂಡುಬಂದರೆ ತಕ್ಷಣವೇ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳ ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ನೀಡಲಾಗಿದೆ.
