
ಸಾಲದ ಕಿರುಕುಳ ಆರೋಪ: ಪಿಎಸಿಎಸ್ ಕಾರ್ಯದರ್ಶಿ ಆತ್ಮಹತ್ಯೆ
ರಾಯಚೂರು,ಸೆ.22- ಮಸ್ಕಿಯ ಮೆದಿಕಿನಾಳ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಸವರಾಜ್ (40) ಆತ್ಮಹತ್ಯೆ ಮಾಡಿಕೊಂಡ ಕಾರ್ಯದರ್ಶಿಯಾಗಿದ್ದು,ಸಾಲದ ಹಣ ಹಾಗೂ ಬಡ್ಡಿ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಬಸವರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆಂಬುದಾಗಿ ತಿಳಿದು ಬಂದಿದೆ.
ಬಸವರಾಜ್ ತಮ್ಮ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೂ ಮುನ್ನ ಅವರು ಡೆತ್ನೋಟ್ ಬರೆದಿಟ್ಟಿದ್ದು, ಅದರಲ್ಲಿ ಸಾಲದ ವ್ಯವಹಾರ ಹಾಗೂ ತಮಗೆ ನೀಡಲಾಗುತ್ತಿದ್ದ ಕಿರುಕುಳದ ಕುರಿತು ಉಲ್ಲೇಖಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸುಮಾರು 70 ಲಕ್ಷದಷ್ಟು ಸಾಲವನ್ನು ಶೇ.6ರ ಬಡ್ಡಿಯೊಂದಿಗೆ ಮರುಪಾವತಿಸುವಂತೆ ಕೆಲವರು ನಿರಂತರವಾಗಿ ಒತ್ತಡ ಹೇರುತ್ತಿದ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಸಾಲದ ಮೊತ್ತದ ಜತೆಗೆ ಬಡ್ಡಿ ಹಾಗೂ ಚಕ್ರಬಡ್ಡಿ ಪಾವತಿಸುವಂತೆ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿದೆ.
ಪಿಎಸಿಎಸ್ ಬ್ಯಾಂಕ್ ಅಧ್ಯಕ್ಷ ಮಧುಲಿಂಗರಾಜ ಧಣಿ, ಸದಸ್ಯರಾದ ಯಲ್ಲಪ್ಪ ಕೋಸಗಿ, ಮುದ್ದಿನಗೌಡ, ಚನಪ್ಪ ಪರಡ್ಡಿ, ರಾಜಣ್ಣ ಗಿಡ್ಡ ಸೇರಿದಂತೆ ಕೆಲವರಿಂದ ಸಾಲ ಪಡೆದಿದ್ದರು ಎನ್ನಲಾಗಿದೆ.ಮತ್ತೊಂದೆಡೆ,ಬಸವರಾಜ್ ಕೆಲವರಿಗೆ ನೀಡಿದ್ದ ಹಣವನ್ನು ವಾಪಸ್ ಕೇಳಿದಾಗ ಹಣ ನೀಡದೆ, ಹಣ ಕೊಟ್ಟಿರುವುದಕ್ಕೆ ಸಾಕ್ಷ್ಯವಿಲ್ಲ ಎಂದು ಹೇಳಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಆರೋಪವೂ ಇದೆ.
ಇದಲ್ಲದೆ, ಪಿಎಸಿಎಸ್ ಬ್ಯಾಂಕ್ನ ಮಸ್ಕಿ ಘಟಕದ ಮ್ಯಾನೇಜರ್ ನಾಗರತ್ನ ಕೆಲಸ ಕೊಡಿಸುವುದಾಗಿ ಹಣ ಪಡೆದಿದ್ದರು. ಹಣ ವಾಪಸ್ ಕೇಳಿದ ಸಂದರ್ಭದಲ್ಲಿ ಕಿರುಕುಳ ನೀಡಿದ್ದರು ಎಂಬ ಆರೋಪವೂ ಕುಟುಂಬದವರಿಂದ ಕೇಳಿಬಂದಿದೆ.
ಘಟನೆ ಕುರಿತು ಮಾಹಿತಿ ತಿಳಿದ ಮಸ್ಕಿ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.
