
ಲಾಡ್ಜ್ನಲ್ಲಿ ಯುವತಿ ಶವ ಪತ್ತೆ; ಕೊಲೆ ಶಂಕೆ
ದೊಡ್ಡಬಳ್ಳಾಪುರ.ಸೆ.17:ನಗರದ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದ ಲಾಡ್ಜ್ವೊಂದರ ಕೊಠಡಿಯಲ್ಲಿ 21 ವರ್ಷದ ಯುವತಿಯ ಶವ ಪತ್ತೆಯಾಗಿರುವ ಘಟನೆ ನಡೆದಿದೆ.ಪ್ರಕರಣದಲ್ಲಿ ಕೊಲೆ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮೃತ ಯುವತಿಯನ್ನು ಗೌರಿಬಿದನೂರು ತಾಲ್ಲೂಕಿನ ಮುದಗೆರೆ ಗ್ರಾಮದ ನಿವಾಸಿ ವಿದ್ಯಾ ಎಂದು ಗುರುತಿಸಲಾಗಿದ್ದು,ಫಾಕ್ಸ್ಕಾನ್ ಕಂಪನಿಯಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿದ್ಯಾ ಮುದಗೆರೆಯ ಆನಂದ್ ಎಂಬುವರನ್ನು ವಿವಾಹವಾಗಿದ್ದು,ದಾಂಪತ್ಯದಲ್ಲಿ ಹೊಂದಾಣಿಕೆ ಇಲ್ಲದ ಹಿನ್ನೆಲೆಯಲ್ಲಿ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
ಗುರುವಾರ ಬೆಳಗ್ಗೆ ಸುಮಾರು 11.48ರ ವೇಳೆಗೆ ವಿದ್ಯಾ ಆನಂದ್ ಜತೆ ಲಾಡ್ಜ್ಗೆ ತೆರಳಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಬಳಿಕ ಲಾಡ್ಜ್ನ ಕೊಠಡಿಯಲ್ಲಿ ದಂಪತಿ ನಡುವೆ ಜಗಳ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಯುವತಿಯ ಸಾವಿನ ಪ್ರಕರಣದಲ್ಲಿ ಆನಂದ್ ಕೈವಾಡದ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆದರೆ,ಯುವತಿಯ ಸಾವಿಗೆ ಪತಿಯೇ ಕಾರಣ ಎಂಬುದು ತನಿಖೆಯಿಂದ ಹೊರಬಿದ್ದಿಲ್ಲ.
ಶವ ಪತ್ತೆ ಮಾಹಿತಿ ತಿಳಿದು ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣ ಹಾಗೂ ಘಟನೆಗೆ ಸಂಭಂದಿಸಿದ ಸಂಪೂರ್ಣ ಮಾಹಿತಿ ಪೊಲೀಸ್ ತನಿಖೆಯ ಬಳಿಕ ತಿಳಿದುಬರಬೇಕಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಿದ್ದಾರೆ.
