
ದೊಡ್ಡಬಳ್ಳಾಪುರದಲ್ಲಿ ಬರದ ಛಾಯೆ!
ದೊಡ್ಡಬಳ್ಳಾಪುರ ತಾಲೂಕಿನ ಒಬದೇನಹಳ್ಳಿ ಗ್ರಾಮದಲ್ಲಿ ಮಳೆಯಿಲ್ಲದೆ ಕಂಗಾಲಾಗಿರುವ ರೈತರು ಹಾಗೂ ಗ್ರಾಮಸ್ಥರು ವರುಣ ದೇವನಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ದಾರೆ. ಹಾಗೂ ರಾಜ್ಯದ ಇತರೆಡೆಗಳಲ್ಲಿ ಉತ್ತಮ ಮಳೆಯಾಗುತ್ತಿದ್ದರೂ, ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮಾತ್ರ ಮಳೆ ಕೈಕೊಟ್ಟಿದ್ದು, ತಾಲೂಕನ್ನು ಬರಪೀಡಿತ ಪ್ರದೇಶವೆಂದು ಸರ್ಕಾರ ಘೋಷಿಸದಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು…!
ಮಳೆಯಾಶ್ರಿತ ಬೆಳೆಗಳೆಲ್ಲವೂ ಸಂಪೂರ್ಣವಾಗಿ ಒಣಗಿಹೋಗಿದ್ದು, ಬಿತ್ತನೆ ಮಾಡಿದ ರೈತರಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಅಂತರ್ಜಲ ಕುಸಿದು ಕುಡಿಯುವ ನೀರಿಗೂ ತೀವ್ರ ಹಾಹಾಕಾರ ಉಂಟಾಗಿದ್ದು, ಜನಸಾಮಾನ್ಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಾದ್ಯಂತ ಮೇವಿನ ಕೊರತೆ ಎದುರಾಗಿರುವುದರಿಂದ ಜಾನುವಾರುಗಳನ್ನು ಸಾಕುವುದು ರೈತರಿಗೆ ಭಾರೀ ಸವಾಲಾಗಿ ಪರಿಣಮಿಸಿದೆ.ಜಲಮೂಲಗಳು ಬತ್ತಿಹೋಗಿರುವ ಕಾರಣ ಮೂಕಜೀವಿಗಳು ಹಾಗೂ ಪಕ್ಷಿಗಳಿಗೆ ಕುಡಿಯಲು ಹನಿ ನೀರಿಲ್ಲದೆ ಪರಿಸ್ಥಿತಿ ದುಸ್ತರವಾಗಿದೆ.ಬೆಳೆ ನಷ್ಟದಿಂದ ಸಾಲದ ಶೂಲೆಗೆ ಸಿಲುಕಿರುವ ಅನ್ನದಾತರು, ಬದುಕು ಸಾಗಿಸುವುದು ಹೇಗೆ ಎಂಬ ಚಿಂತೆಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಕೂಡಲೇ ಜಿಲ್ಲೆ ಮತ್ತು ತಾಲೂಕನ್ನು ಬರಪೀಡಿತ ಎಂದು ಘೋಷಿಸಿ, ಸಂಕಷ್ಟದಲ್ಲಿರುವ ರೈತರಿಗೆ ಸೂಕ್ತ ಪರಿಹಾರ ಹಾಗೂ ಜಾನುವಾರುಗಳಿಗೆ ಮೇವು ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಸರ್ಕಾರ ಹಾಗೂ ಜನಪ್ರತಿನಿಧಿಗಳು ಇನ್ನು ಮುಂದೆಯೂ ನಿರ್ಲಕ್ಷ್ಯ ತೋರಿದರೆ ಉಗ್ರ ಹೋರಾಟ ನಡೆಸುವುದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
