LatestTop Storiesಕೋಲಾರ-Kolaraಜಿಲ್ಲಾ ಸುದ್ದಿಗಳು | District News

ಅಗರ ಪಂಚಾಯಿತಿ ವ್ಯಾಪ್ತಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹಿಡಿ ಶಾಪ ಹಾಕುತ್ತಿರುವ ಗ್ರಾಮಸ್ಥರು!

ಕೋಲಾರ : ಮುಳಬಾಗಿಲು ತಾಲೂಕು ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಸ್.ಬಿಸನಹಳ್ಳಿ ಮಜರ ಸಾತನೂರು ದಿನ್ನಹಳ್ಳಿ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಕಟ್ಟಿ 3 ವರ್ಷ ಕಳೆದರೂ ಇನ್ನೂ ಜನರ ಬಾಯಿಗೆ ನೀರು ಬಿದ್ದಿಲ್ಲ.

2000ಕ್ಕೂ ಹೆಚ್ಚು ಜನಸಂಖ್ಯೆ ಇರುವ ಈ ಮೂರು ಗ್ರಾಮಗಳಿಗೆ 2022-23ನೇ ಸಾಲಿನಲ್ಲಿ ಅಂದಿನ ಶಾಸಕರಾದ ಎಚ್.ನಾಗೇಶ್ ರವರ KUADS ಯೋಜನೆಯಡಿ ಸುಮಾರು ರೂ. 5.00 ಲಕ್ಷ ಅನುದಾನದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣ ಮಾಡಲಾಗಿದೆ.

ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ, ಒಳಗೆ ಮೆಷಿನರಿ, ಪೀಠೋಪಕರಣಗಳು ಅಳವಡಿಕೆಯಾಗಿವೆ. ಆದರೆ ದುರಂತವೆಂದರೆ ಅಂದಿನಿಂದ ಇಂದಿನವರೆಗೆ ಘಟಕಕ್ಕೆ ಬೀಗ ಹಾಕಲಾಗಿದೆ!ಕುಡಿಯಲು ಶುದ್ಧ ನೀರು ಸಿಗದೆ ಈ ಮೂರು ಗ್ರಾಮದ ಜನರು ದಿನಾ ಸುಮಾರು 4 ಕಿಲೋಮೀಟರ್ ದೂರದಲ್ಲಿರುವ ಅಗರ ಗ್ರಾಮ ಹಾಗೂ ಬೋವಿಹಳ್ಳಿ ಗ್ರಾಮಕ್ಕೆ ಅಲೆಯಬೇಕಾದ ದುಸ್ಥಿತಿ ಬಂದಿದೆ.

ತಾಲೂಕು ಪಂಚಾಯಿತಿ ಅಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ಹಲವು ಬಾರಿ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಪೂರ್ಣ ನ್ಯೂಸ್ ವರದಿಗಾರರು ಅಧಿಕಾರಿಗಳ ಗಮನಕ್ಕೆ ತಂದರೂ ಕ್ಯಾರೇ ಎಂದಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ಮೂರು ವರ್ಷದಿಂದ ಬಳಕೆಯಾಗದೆ ಹೊಸ ಮೆಷಿನರಿಗಳು, ಪೀಠೋಪಕರಣಗಳು ತುಕ್ಕು ಹಿಡಿದು ಹಾಳಾಗುತ್ತಿವೆ. ಸರ್ಕಾರದ ಲಕ್ಷಾಂತರ ರೂಪಾಯಿ ನೀರಿನಲ್ಲಿ ಹೋಮವಾದಂತಾಗಿದೆ. ಮೂಲಭೂತ ಸೌಕರ್ಯವಾದ ಕುಡಿಯುವ ನೀರಿನಿಂದಲೇ ಈ ಗ್ರಾಮಗಳು ವಂಚಿತವಾಗಿರುವುದು ವಿಪರ್ಯಾಸ.

ಈ ಕೂಡಲೇ ಜಿಲ್ಲಾ ಪಂಚಾಯತ್ CEO, ಮುಳಬಾಗಿಲು ತಾಲೂಕು ಪಂಚಾಯತ್ EO ಅವರು ಮಧ್ಯ ಪ್ರವೇಶಿಸಿ ಬೀಗ ಹಾಕಿರುವ ಶುದ್ಧ ನೀರಿನ ಘಟಕವನ್ನು ತಕ್ಷಣ ಚಾಲನೆಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Share with Friends
author avatar
Digital Desk