
ಕಬ್ಬಿನ ದರ ಏರಿಕೆಗೆ ರೈತರ ಬಿಗಿ ಪಟ್ಟು..!
ಚಿಕ್ಕೋಡಿ: ಗುರ್ಲಾಪುರದ ಐತಿಹಾಸಿಕ ಕಬ್ಬು ಬೆಳೆಗಾರರ ಹೋರಾಟ ಹಾಗೂ ಕಬ್ಬಿನ ದರ ನಿಗದಿಗೆ ಸಂಬಂಧಿಸಿದಂತೆ ರೈತರ ಪ್ರಮುಖ ಬೇಡಿಕೆ
ಚಿಕ್ಕೋಡಿಯ ಗುರ್ಲಾಪುರದ ಐತಿಹಾಸಿಕ ಕಬ್ಬು ಬೆಳೆಗಾರರ ಹೋರಾಟದ ಹಿನ್ನೆಲೆಯಲ್ಲಿ, 2026-27ನೇ ಸಾಲಿನ ಕಬ್ಬಿನ ಸೂಕ್ತ ಬೆಲೆ ನಿಗದಿ ಮಾಡುವ ಕುರಿತು ಕಬ್ಬು ಬೆಳೆಗಾರರ ಮಹತ್ವದ ಪೂರ್ವಭಾವಿ ಸಭೆ ನಡೆಯಿತು. ಈ ವೇಳೆ ಮಾತನಾಡಿದ ರೈತ ಮುಖಂಡರು, ರೈತರ ಹಿತ ಕಾಯಲು ಸರ್ಕಾರ ಹಾಗೂ ಕಾರ್ಖಾನೆಗಳ ವಿರುದ್ಧ ಉಗ್ರ ಹೋರಾಟಕ್ಕೆ ಸಿದ್ಧತೆ ನಡೆಸುತ್ತಿರುವುದಾಗಿ ಎಚ್ಚರಿಸಿದ್ದಾರೆ.
ಈ ಕುರಿತು ಶಶಿಕಾಂತ್ ಗುರೂಜಿ ಹಾಗೂ ಮಹಾರಾಷ್ಟ್ರದ ಮಾಜಿ ಸಂಸದ ರಾಜು ಶೆಟ್ಟಿ ಅವರ ನಾಯಕತ್ವದಲ್ಲಿ ಈ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ. ಕಬ್ಬಿನ ದರ ನಿಗದಿ ಹಾಗೂ ರೈತರ ಬಾಕಿ ಸಮಸ್ಯೆಗಳ ಕುರಿತು ಸಭೆಯಲ್ಲಿ ಸಾವಿರಾರು ರೈತರು ಭಾಗವಹಿಸಿ ಚರ್ಚಿಸಿದ್ದಾರೆ.ಕೇಂದ್ರ ಸರ್ಕಾರವು ಎಫ್‌ಆರ್‌ಪಿ (FRP) ಅಥವಾ ಎಂಎಸ್‌ಪಿ (MSP) ದರವನ್ನು 32 ರೂಪಾಯಿಗೆ ನಿಗದಿಪಡಿಸಿ ಸುಮಾರು 7 ವರ್ಷಗಳಾಗಿವೆ.

ಪ್ರಸ್ತುತ ರೈತರ ವೆಚ್ಚ ಹೆಚ್ಚಾಗಿರುವುದರಿಂದ, ಕಬ್ಬಿನ ಎಂಎಸ್‌ಪಿ ಕನಿಷ್ಠ 50 ರೂಪಾಯಿಗೆ ಏರಿಕೆಯಾಗಬೇಕು. ಇದರಿಂದ ಸಕ್ಕರೆ ಕಾರ್ಖಾನೆಗಳು ರೈತರಿಗೆ ಪ್ರತಿ ಟನ್‌ಗೆ 4,300 ರಿಂದ 4,400 ರವರೆಗೆ ದರ ನೀಡಲು ಸಾಧ್ಯವಾಗುತ್ತದೆ.ಕೊಕಾಕೋಲಾ ಸೇರಿದಂತೆ ಕಮರ್ಷಿಯಲ್ ಉದ್ದೇಶಗಳಿಗೆ ಸಕ್ಕರೆ ಮತ್ತು ನೀರಿನ ಬಳಕೆ ಹೆಚ್ಚಾಗುತ್ತಿರುವುದರಿಂದ,
ಇಂತಹ ಸಂಸ್ಥೆಗಳಿಂದ ಕನಿಷ್ಠ 100 ರೂಪಾಯಿ ಹೆಚ್ಚಿನ ದರ ಪಡೆದು ಆ ಹಣವನ್ನು ರೈತರಿಗೆ ತಲುಪಿಸಬೇಕು. ಅಲ್ಲದೆ, ರಾಜ್ಯದ ಎಥನಾಲ್ ಸಂಪೂರ್ಣ ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕಿದೆ.ಎಂದು ರೈತ ಮುಖಂಡ ಚುನ್ನಪ್ಪ ಪೂಜಾರಿ ಹೇಳಿದರು.ಇನ್ನೂ ಪೂರ್ವಭಾವಿ ಸಭೆಯಲ್ಲಿ ಅಂತಿಮ ತೀರ್ಮಾನಗಳನ್ನು ಕೈಗೊಂಡು, ಮುಂದಿನ ಹೋರಾಟದ ರೂಪುರೇಷೆಗಳನ್ನು ಹಾಗೂ ದರ ನಿಗದಿಯ ಬೇಡಿಕೆಗಳನ್ನು ರೈತ ಮುಖಂಡರು ಅಧಿಕೃತವಾಗಿ ಪ್ರಕಟಿಸಲಿದ್ದಾರೆ.
