
POP ಗಣೇಶ ಮೂರ್ತಿ ಮಾರಾಟಕ್ಕೆ ಬ್ರೇಕ್ : ಸಂಪೂರ್ಣ ನ್ಯೂಸ್ 24*7 ಬಿಗ್ ಇಂಪ್ಯಾಕ್ಟ್
ವಿಜಯಪುರ: POP ಗಣೇಶ ಮೂರ್ತಿಗಳ ಮಾರಾಟ ಹಾಗೂ ಸಂಗ್ರಹಕ್ಕೆ ಸಂಪೂರ್ಣ ನಿಷೇಧವಿದ್ದರೂ ನಿಡಗುಂದಿ ತಾಲೂಕಿನ ಕೆಲವೆಡೆ ಗಣೇಶ ಮೂರ್ತಿಗಳ ಮಾರಾಟ ಆರಂಭವಾಗಿದ್ದ ಕುರಿತು ಸಂಪೂರ್ಣ ನ್ಯೂಸ್ 24*7 ವರದಿ ಪ್ರಕಟಿಸಿತ್ತು. ಇದೀಗ ವರದಿಯ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.
POP ಗಣೇಶ ಮೂರ್ತಿಗಳ ಮಾರಾಟದ ಕುರಿತು ರವಿವಾರ ವರದಿ ಪ್ರಸಾರವಾಗಿದ್ದು, ಇದರ ಬೆನ್ನಲ್ಲೇ ಇಂದು ಮಧ್ಯಾಹ್ನ ನಿಡಗುಂದಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಿತು.
2026ರ ಆಗಸ್ಟ್ 5ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಇಲಾಖೆಯಿಂದ POP ಗಣೇಶ ಮೂರ್ತಿಗಳ ಬಳಕೆ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದರೂ, ಅಧಿಕಾರಿಗಳು ಪರಿಶೀಲನೆ ನಡೆಸದಿರುವ ಕುರಿತು ವರದಿಯಲ್ಲಿ ಗಮನ ಸೆಳೆಯಲಾಗಿತ್ತು. ಗಣೇಶೋತ್ಸವಕ್ಕೆ ತಿಂಗಳುಗಳ ಮುಂಚಿತವಾಗಿಯೇ ಕೆಲ ಮಾರಾಟಗಾರರು POP ಮೂರ್ತಿಗಳ ಮಾರಾಟಕ್ಕೆ ಮುಂದಾಗಿದ್ದರು.
ಇದೀಗ ಅಧಿಕಾರಿಗಳು ಮಾರಾಟ ಮಳಿಗೆಗಳ ಮಾಲೀಕರೊಂದಿಗೆ ಸಭೆ ನಡೆಸಿ, POP ಗಣೇಶ ಮೂರ್ತಿಗಳ ಮಾರಾಟವನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಿದ್ದಾರೆ. POP ಗಣೇಶ ಮೂರ್ತಿಗಳಿಂದ ನೀರಿನಲ್ಲಿರುವ ಜಲಚರ ಜೀವಿಗಳ ಮೇಲೆ ಹಾಗೂ ನೀರಿನ ಗುಣಮಟ್ಟದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ನಿಷೇಧಿತ POP ಗಣೇಶ ಮೂರ್ತಿಗಳ ಮಾರಾಟ ಸೇರಿದಂತೆ ನಿಯಮ ಉಲ್ಲಂಘಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರು: ಅಶೋಕ ಗುಂಡಿನಮನಿ
