LatestTop Storiesರಾಜ್ಯ-Karnataka

ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್, ವದಂತಿಗಳಿಗೆ ತೆರೆ

ಬೆಂಗಳೂರು: ಎಂಎಸ್‌ಎಂಇ (ಸೂಕ್ಷ್ಮ ಹಾಗೂ ಸಣ್ಣ ಉದ್ಯಮ) ವ್ಯವಸ್ಥಾಪಕ ನಿರ್ದೇಶಕ ಹಾಗೂ ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ನಾಪತ್ತೆಯಾಗಿದ್ದಾರೆ ಎಂಬ ವದಂತಿಗೆ ಇದೀಗ ತೆರೆ ಬಿದ್ದಿದೆ.

ಈ ಕುರಿತು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಾಮಾಜಿಕ ಜಾಲತಾಣ ‘ಎಕ್ಸ್‌’ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಜ್ಞಾನೇಂದ್ರ ಕುಮಾರ್ ಅವರು ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳೊಂದಿಗೆ ಸಂಪರ್ಕದಲ್ಲಿದ್ದು, ತಾವು ಸುರಕ್ಷಿತವಾಗಿರುವುದಾಗಿ ತಿಳಿಸಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ.

ಕುಟುಂಬದಲ್ಲಿ ಎದುರಾದ ತುರ್ತು ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಜೆ ಪಡೆದು ತರಾತುರಿಯಲ್ಲಿ ಸ್ವಂತ ಊರಿಗೆ ತೆರಳಬೇಕಾಯಿತು ಎಂದು ಜ್ಞಾನೇಂದ್ರ ಕುಮಾರ್ ತಿಳಿಸಿದ್ದಾರೆ. ಪ್ರಯಾಣದ ವೇಳೆ ಅವರ ಅಧಿಕೃತ ಮೊಬೈಲ್‌ ಫೋನ್‌ ಬಂದ್ ಆಗಿದ್ದರಿಂದ ಸಂಪರ್ಕಕ್ಕೆ ಸಿಗದೆ ಗೊಂದಲ ಹಾಗೂ ಊಹಾಪೋಹಗಳು ಸೃಷ್ಟಿಯಾಗಿದ್ದವು ಎಂದು ಸಚಿವರು ತಿಳಿಸಿದ್ದಾರೆ.

ಆಗಸ್ಟ್ 20ರ ಮಧ್ಯಾಹ್ನದಿಂದ ಜ್ಞಾನೇಂದ್ರ ಕುಮಾರ್ ಅವರು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂದು ಅವರದೇ ಬ್ಯಾಚ್‌ನ ಐಎಎಸ್ ಅಧಿಕಾರಿಯೊಬ್ಬರು ನಗರ ಪೊಲೀಸ್ ಕಚೇರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರು ಅಧಿಕಾರಿಯ ಪತ್ತೆಗೆ ತೀವ್ರ ಹುಡುಕಾಟ ನಡೆಸಿದ್ದರು.

ಆಗಸ್ಟ್ 20ರ ಮಧ್ಯಾಹ್ನ 3 ಗಂಟೆಗೆ ಇಂಡಿಗೊ ವಿಮಾನದಲ್ಲಿ ದೆಹಲಿಗೆ ಟಿಕೆಟ್ ಬುಕ್ ಮಾಡಿರುವುದು ಪತ್ತೆಯಾಗಿತ್ತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಅಲ್ಲದೆ, ಇಂಡಿಗೊ ಸಂಸ್ಥೆಯಿಂದಲೂ ಮಾಹಿತಿ ಕೋರಲಾಗಿತ್ತು.

ಇದೀಗ ಜ್ಞಾನೇಂದ್ರ ಕುಮಾರ್ ಅವರು ಸರ್ಕಾರದೊಂದಿಗೆ ಸಂಪರ್ಕದಲ್ಲಿರುವುದಾಗಿ ಖಚಿತಪಡಿಸಿರುವ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣದ ಕುರಿತು ಉಂಟಾಗಿದ್ದ ಗೊಂದಲಗಳಿಗೆ ತೆರೆ ಬಿದ್ದಿದೆ.

Share with Friends
author avatar
Digital Desk