
ವಿಜಯಪುರದಲ್ಲಿ ಹೃದಯ ವಿದ್ರಾವಕ ಘಟನೆ – ಬಾವಿಗೆ ಬಿದ್ದು 2 ಮಕ್ಕಳು ಸಾವು, ತಂದೆ ನಾಪತ್ತೆ
ವಿಜಯಪುರ: ಪೂಜೆಗೆಂದು ನೀರು ತರಲು ಹೋದಾಗ ಸಂಭವಿಸಿದ ದುರ್ಘಟನೆಯಲ್ಲಿ ಇಬ್ಬರು ಮಕ್ಕಳು ಬಾವಿಗೆ ಬಿದ್ದು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ವಿಜಯಪುರ ನಿಡಗುಂದಿಯ ಬಳಬಟ್ಟಿಯಲ್ಲಿ ನಡೆದಿದೆ.
ಬಾವಿಗೆ ಬಿದ್ದು ಸಾವಿಗೀಡಾದ ಮಕ್ಕಳನ್ನು ಸಾಕ್ಷಿ (10) ಮತ್ತು ರಕ್ಷಿತಾ (15) ಎಂದು ಗುರುತಿಸಲಾಗಿದೆ.ನಿನ್ನೆ ಸಂಜೆ ಮನೆಯಲ್ಲಿ ಪೂಜೆ ಇದ್ದ ಕಾರಣ ನೀರು ತರಲು ಇಬ್ಬರು ಸಹೋದರಿಯರು ಬಾವಿ ಬಳಿ ಹೋಗಿದ್ದರು. ಆ ವೇಳೆ ಕಾಲು ಜಾರಿ ಬಾವಿಗೆ ಬಿದ್ದಿದ್ದಾರೆ ಎಂದು ತಿಳಿದುಬಂದಿದೆ.
ಮಕ್ಕಳು ಬಾವಿಗೆ ಬಿದ್ದಿರುವುದನ್ನು ನೋಡಿ ಅವರನ್ನು ರಕ್ಷಿಸಲು ತಂದೆ ಸಾಬಣ್ಣ ಬಾವಿಗೆ ಜಿಗಿದಿದ್ದಾರೆ. ಆದರೆ ದುರದೃಷ್ಟವಶಾತ್ ಅವರು ಕೂಡ ನೀರಿನಲ್ಲಿ ಮುಳುಗಿದ್ದಾರೆ.
17 ಗಂಟೆಗಳಾದರೂ ತಂದೆ ಸಾಬಣ್ಣ ಸುಳಿವು ಇಲ್ಲ. ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಸಾಕ್ಷಿ, ರಕ್ಷಿತಾ ಮೃತದೇಹವನ್ನು ಹೊರಗೆ ತೆಗೆದಿದ್ದಾರೆ. ಆದರೆ ತಂದೆಯ ಮೃತದೇಹಕ್ಕಾಗಿ ಇನ್ನೂ ಶೋಧ ಕಾರ್ಯ ಮುಂದುವರೆದಿದೆ.
ಸಾಬಣ್ಣ ಪತ್ತೆಗಾಗಿ ಮುಂದುವರಿದ ಶೋಧ ಕಾರ್ಯ ನಡೆಯುತ್ತಿದ್ದು, ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನಿಡಗುಂದಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಆಗಿದೆ.
