
ಜಿಲ್ಲಾಧಿಕಾರಿ ಭವನದಲ್ಲಿ ಖಾದಿ ಇಲಾಖೆ ನೌಕರನ ಆತ್ಮಹತ್ಯೆ ಯತ್ನ..
ಧಾರವಾಡ: ಧಾರವಾಡ ಜಿಲ್ಲಾಧಿಕಾರಿ ಭವನದಲ್ಲಿ ಇಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಸ್ಥಳದಲ್ಲಿ ತೀವ್ರ ಗೊಂದಲ ಉಂಟಾಯಿತು.
ಖಾದಿ ಗ್ರಾಮೋದ್ಯೋಗ ಇಲಾಖೆಯ ನೌಕರ ಶಿವಪ್ರಸಾದ್ ಪಾಟೀಲ್ (32) ಅವರು ಜಿಲ್ಲಾಧಿಕಾರಿ ಭವನದ ಆವರಣದಲ್ಲಿರುವ ಖಾದಿ ಗ್ರಾಮೋದ್ಯೋಗ ಕಚೇರಿಯ ಮೆಟ್ಟಿಲುಗಳ ಮೇಲೆ ತಮ್ಮ ಕೈಗೆ ಚಾಕುವಿನಿಂದ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಘಟನೆ ನಡೆದ ಸಮಯದಲ್ಲಿ ಶಿವಪ್ರಸಾದ್ ಅವರು ಕೈಗೆ ಚಾಕು ಇರಿದುಕೊಂಡು ಮೆಟ್ಟಿಲುಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದರು .
ತೀವ್ರ ರಕ್ತಸ್ರಾವವಾಗಿ ಪ್ರಜ್ಞೆ ತಪ್ಪಿಬಿದ್ದಿದ್ದ ಅವರನ್ನು ಮೊದಲು ಗಮನಿಸಿದ ಇಲಾಖೆಯ ಮೇಲಾಧಿಕಾರಿಗಳು ತಕ್ಷಣ ಹೊಯ್ಸಳ ವಾಹನದ ಮೂಲಕ ಧಾರವಾಡ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಿದರು.ಸದ್ಯ ಅವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಯತ್ನಿಸಲು ಕಾರಣ ಏನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ವೈಯಕ್ತಿಕ ಕಿರುಕುಳ ಅಥವಾ ಕಚೇರಿ ಸಮಸ್ಯೆ ಇದಕ್ಕೆ ಕಾರಣವೇ ಎಂಬ ಆಯಾಮದಲ್ಲಿಯೂ ತನಿಖೆ ಮುಂದುವರೆದಿದೆ.ಘಟನೆಯಿಂದಾಗಿ ಜಿಲ್ಲಾಧಿಕಾರಿ ಭವನದಲ್ಲಿ ಸ್ವಲ್ಪ ಸಮಯ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
