Latestಬೆಂಗಳೂರು-Bengaluru

ಬೆಂಗಳೂರಿನಲ್ಲಿ ಅಂಡರ್‌ಪಾಸ್ ಕಾಮಗಾರಿ ವೇಳೆ ಮಣ್ಣಿನ ತಡೆಗೋಡೆ ಕುಸಿದು ಇಬ್ಬರು ಕಾರ್ಮಿಕರು ಸಾವು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬಿಡಿಎ ಕಾಮಗಾರಿ ವೇಳೆ ಭೀಕರ ದುರಂತ ಸಂಭವಿಸಿದೆ. ಕಂಠೀರವ ಸ್ಟುಡಿಯೋ ಬಳಿಯ ಡಾ. ರಾಜ್‌ಕುಮಾರ್ ಪುಣ್ಯಭೂಮಿ ರಸ್ತೆಯಲ್ಲಿ ನಡೆಯುತ್ತಿದ್ದ ಅಂಡರ್‌ಪಾಸ್ ಕಾಮಗಾರಿ ವೇಳೆ ಏಕಾಏಕಿ ಮಣ್ಣಿನ ತಡೆಗೋಡೆ ಕುಸಿದುಬಿದ್ದು, ಹೊರರಾಜ್ಯದ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ.

ನಂದಿನಿ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯ ಬಿಡಿಎ ಅಂಡರ್‌ಪಾಸ್ ಕಾಮಗಾರಿ ಸ್ಥಳದಲ್ಲಿ ಇಂದು ಬೆಳಗ್ಗೆ 11:19ರ ಸುಮಾರಿಗೆ ಈ ಘಟನೆ ನಡೆದಿದೆ. ಸುಮಾರು 20 ಅಡಿ ಆಳದ ಗುಂಡಿಯಲ್ಲಿ 20ಕ್ಕೂ ಹೆಚ್ಚು ಕಾರ್ಮಿಕರು ನೀರು ಹೊರಹಾಕುವ ಕಾರ್ಯದಲ್ಲಿ ತೊಡಗಿದ್ದರು. ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಮೇಲ್ಭಾಗದಲ್ಲಿ ಸಂಗ್ರಹವಾಗಿದ್ದ ಡೆಬ್ರಿಸ್‌ನ ಭಾರಕ್ಕೆ ಮಣ್ಣಿನ ತಡೆಗೋಡೆ ಏಕಾಏಕಿ ಕುಸಿದಿದೆ ಎನ್ನಲಾಗಿದೆ.

ಮಣ್ಣಿನಡಿ ಐವರು ಕಾರ್ಮಿಕರು ಸಿಲುಕಿಕೊಂಡಿದ್ದರು. ಈ ಪೈಕಿ ಒಡಿಶಾ ಮೂಲದ ಸೋನಾರಾಮ್ (26) ಹಾಗೂ ಜಾರ್ಖಂಡ್ ಮೂಲದ ಪರಿಮಳ್ (31) ಉಸಿರುಗಟ್ಟಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡ ಸದಾನಂದ್, ಸುನೀಲ್ ಹಾಗೂ ಇರ್ಮಿಯಾಜ್ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸೋನಾರಾಮ್ ಅವರ ಮೃತದೇಹವನ್ನು ತಕ್ಷಣವೇ ಹೊರತೆಗೆಯಲಾಯಿತು. ಆದರೆ ಪರಿಮಳ್ ಅವರ ಮೃತದೇಹವನ್ನು ಹೊರತೆಗೆಯುವ ವೇಳೆ ಮತ್ತೆ ಮಣ್ಣು ಕುಸಿದ ಪರಿಣಾಮ ರಕ್ಷಣಾ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು.

ಘಟನಾ ಸ್ಥಳಕ್ಕೆ ಉತ್ತರ ವಿಭಾಗದ ಡಿಸಿಪಿ ಬಿ.ಎಸ್. ನೇಮೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಮಗಾರಿಯಲ್ಲಿ ಭದ್ರತಾ ಲೋಪವಾಗಿದೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಮಳೆಯ ನಡುವೆಯೂ ಸೂಕ್ತ ಮುನ್ನೆಚ್ಚರಿಕೆ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿ ಮುಂದುವರಿಸಿದ್ದೇ ದುರಂತಕ್ಕೆ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಬಿಡಿಎ ನಿರ್ವಹಿಸುತ್ತಿದ್ದ ಕಾಮಗಾರಿಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸಲಾಗಿತ್ತೇ ಎಂಬುದರ ಕುರಿತು ಇದೀಗ ತನಿಖೆ ನಡೆಯುತ್ತಿದೆ.

Share with Friends
author avatar
Digital Desk