
ಬೆಂಗಳೂರಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ ; ಬನಶಂಕರಿ ಭಾಗದಲ್ಲಿ ಆತಂಕ
ಬೆಂಗಳೂರಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಬನಶಂಕರಿ ಭಾಗದಲ್ಲಿ ಆತಂಕ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ನಗರದ ಬನಶಂಕರಿ ಭಾಗದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.
ಬನಶಂಕರಿ 6ನೇ ಹಂತದ 2ನೇ ಬ್ಲಾಕ್‌ನ ‘ಲೆಪರ್ಡ್ ಸೈಟ್’ ಪ್ರದೇಶದಲ್ಲಿ ನಿನ್ನೆ ಸಂಜೆ ಸುಮಾರು 6.30ರ ವೇಳೆಗೆ ಚಿರತೆ ಕಾಣಿಸಿಕೊಂಡಿದೆ. ಇಲ್ಲಿನ ಬಿಡಿಎ ಸೈಟ್‌ನಲ್ಲಿ ಚಿರತೆ ಓಡಾಡುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ.
ಚಿರತೆ ಓಡಾಡುತ್ತಿರುವ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಗ್ಗಲೀಪುರ ಅರಣ್ಯಾಧಿಕಾರಿಗಳಿಂದ ಕಾರ್ಯಾಚರಣೆ
ಚಿರತೆ ಕಾಣಿಸಿಕೊಂಡ ಮಾಹಿತಿ ಹಿನ್ನೆಲೆಯಲ್ಲಿ ಕಗ್ಗಲೀಪುರ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ನಿಗಾ ವಹಿಸಿದ್ದಾರೆ. ಪಟಾಕಿ ಸಿಡಿಸಿ ಶಬ್ದ ಮಾಡುವ ಮೂಲಕ ಚಿರತೆಯನ್ನು ಪತ್ತೆಹಚ್ಚಲು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.
ಸಂಜೆ 8 ಗಂಟೆ ಸುಮಾರಿಗೆ ಸ್ಥಳಕ್ಕೆ ತೆರಳಿದ್ದ ಅರಣ್ಯ ಸಿಬ್ಬಂದಿ ರೌಂಡ್ಸ್ ನಡೆಸಿ ಬಳಿಕ ವಾಪಸ್ ಆಗಿದ್ದಾರೆ. ತೂರಹಳ್ಳಿ ಅರಣ್ಯ ಪ್ರದೇಶದಿಂದಲೇ ಚಿರತೆ ಬಂದಿರುವ ಸಾಧ್ಯತೆ ಇದೆ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿರತೆ ಮತ್ತೆ ಕಾಣಿಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿ ನಿಗಾ ಮುಂದುವರಿಸಿದ್ದಾರೆ. ನಾಳೆ ಬೆಳಗ್ಗೆ ಮತ್ತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಲು ಅರಣ್ಯ ಇಲಾಖೆ ಸಿಬ್ಬಂದಿ ಸಿದ್ಧತೆ ನಡೆಸಿದ್ದಾರೆ.
ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಸೂಚಿಸಿದೆ.
