
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮಹತ್ವದ ತಿರುವು. 3 ಆರೋಪಿಗಳು ಮಾಫಿ ಸಾಕ್ಷಿಯಾಗಲು ಅರ್ಜಿ..
ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಪ್ರಕರಣದ ಎ-14 ಆರೋಪಿ ಪ್ರದೋಶ್ ಸೇರಿ ಮೂವರು ಆರೋಪಿಗಳು ತಮ್ಮನ್ನು ಮಾಫಿ ಸಾಕ್ಷಿ ಮಾಡಬೇಕು ಎಂದು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ 59ನೇ ಸೆಷನ್ಸ್ ನ್ಯಾಯಾಲಯದಲ್ಲಿ ಇಂದು ಈ ಪ್ರಕರಣದ ವಿಚಾರಣೆ ನಡೆಯಿತು. ವಿಚಾರಣೆ ವೇಳೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಪ್ರಬಲವಾದ ವಾದ ಮಂಡಿಸಿದರು. ಇದಕ್ಕೆ ಪ್ರತ್ಯುತ್ತರವಾಗಿ ನಟ ದರ್ಶನ್ ಪರ ಹಿರಿಯ ವಕೀಲ ಹಷ್ಮತ್ ಪಾಷಾ ಪ್ರತಿವಾದ ಮಂಡಿಸಿದ್ದಾರೆ.
ಸಿಆರ್ಪಿಸಿ 307 ಅಡಿಯಲ್ಲಿ ಮಾಫಿ ಸಾಕ್ಷಿ ಕೋರಿ ಅರ್ಜಿ ಸಲ್ಲಿಕೆ ಆಗಿದೆ ಎಂದು SPP ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ತಿಳಿಸಿದರು. ಈ ಸೆಕ್ಷನ್ 307 ಏನು ಹೇಳುತ್ತದೆ ಮತ್ತು ಯಾವ ಸಂದರ್ಭದಲ್ಲಿ ಮಾಫಿ ಸಾಕ್ಷಿ ಅರ್ಜಿಯನ್ನು ಪರಿಗಣಿಸಬಹುದು ಎಂಬುದರ ಬಗ್ಗೆ ಹೈಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದರು.
ವಿನಯ್ ಕುಲಕರ್ಣಿ ಕೇಸ್ ಜೊತೆಗೆ ಯೋಗೀಶ್ ಗೌಡ ಕೇಸ್ನ ಉದಾಹರಣೆಯನ್ನೂ ನೀಡಿದರು. ಯೋಗೀಶ್ ಗೌಡ ಕೇಸ್‌ನಲ್ಲಿ ಬಸವರಾಜ್ ಮುತ್ತಗಿ ಮಾಫಿ ಸಾಕ್ಷಿ ಆಗಿದ್ದರು. ಆ ಆದೇಶದ ಪ್ರತಿಯನ್ನು ಕೋರ್ಟ್ ಗೆ ಸಲ್ಲಿಸಿದ್ದೇನೆ ಎಂದು ಹೇಳಿದರು.ಮೊದಲು ಮಾಫಿ ಸಾಕ್ಷಿ ಹೇಳಿಕೆ ನೀಡಲಿ. ಆ ಬಳಿಕ ಅದನ್ನು ಪರಿಗಣಿಸಬೇಕಾ ಬೇಡವಾ ಎಂಬ ತೀರ್ಮಾನವನ್ನು ಕೋರ್ಟ್ ಮಾಡಬಹುದು ಎಂದು ಪ್ರಸನ್ನ ಕುಮಾರ್ ವಾದ ಮಂಡಿಸಿದರು.
ದರ್ಶನ್ ಪರ ವಕೀಲರ ತೀವ್ರ ಆಕ್ಷೇಪ
SPP ಅವರ ವಾದಕ್ಕೆ ದರ್ಶನ್ ಪರ ವಕೀಲರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಏನಾಗುತ್ತಿದೆ ಎಂದು ತಿಳಿಯುವ ಮತ್ತು ವಾದ ಮಂಡಿಸುವ ಮೂಲಭೂತ ಹಕ್ಕು ಆರೋಪಿಗೆ ಇದೆ. ಆದರೆ ಮಾಫಿ ಸಾಕ್ಷಿ ಕೋರಿದ ಅರ್ಜಿಯ ಪ್ರತಿಯನ್ನು ನಮಗೆ ನೀಡಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಸಾಕ್ಷಿ ಹೇಳುತ್ತೇನೆ ಎಂದ ತಕ್ಷಣ ಕ್ಷಮಾದಾನ ನೀಡಲು ಸಾಧ್ಯವಿಲ್ಲ. ನ್ಯಾಯಾಲಯವು ಕಾನೂನಿನ ಪ್ರಕಾರ ನಿರ್ಧಾರ ತೆಗೆದುಕೊಳ್ಳಬೇಕು ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸುಜಾತಾ ಮಡಿವಾಳಪ್ಪ ಅವರು ಈ ಕುರಿತ ಆದೇಶವನ್ನು ಆಗಸ್ಟ್ 10ಕ್ಕೆ ಕಾಯ್ದಿರಿಸಿದ್ದಾರೆ.ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಪ್ರಮುಖ ಸಂಚುಕೋರಲ್ಲಿ ಒಬ್ಬನಾಗಿದ್ದಾನೆ ಎಂಬುದು ಪೊಲೀಸರ ಆರೋಪ.
