
ಜನರಿಗೆ ಉಂಡೆನಾಮ ಹಾಕ್ತಿದ್ದ ದಂಪತಿ ಅಂದರ್: ಪ್ಯಾಕಿಂಗ್ ಹೆಸರಲ್ಲಿ ಕೋಟಿ ವಂಚನೆ..!
ಬೆಂಗಳೂರು: “ಪ್ಯಾಕಿಂಗ್ ಕೆಲಸ ಕೊಡ್ತೀವಿ, ಮನೆಯಲ್ಲೇ ಕುಳಿತು ಲಕ್ಷ ಗಳಿಸಿ” ಎಂದು ಜಾಹೀರಾತು ನೀಡಿ ಸಾವಿರಾರು ಜನರಿಗೆ ಕೋಟಿ ಕೋಟಿ ವಂಚನೆ ಮಾಡುತ್ತಿದ್ದ ಕಿಲಾಡಿ ದಂಪತಿಯನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಬೂದು ಬತ್ತಿ, ಮೆಣದ ಬತ್ತಿ ಪ್ಯಾಕಿಂಗ್ ನೆಪದಲ್ಲಿ ವಂಚನೆ ಬಂಧಿತರನ್ನು ಕಿರಣ್ ಮತ್ತು ಆರತಿ ಎಂದು ಗುರುತಿಸಲಾಗಿದೆ. ಇವರು “ಕಾಮಿಕಾದೇವಿ ಎಂಟರ್ಪ್ರೈಸಸ್” ಹೆಸರಿನಲ್ಲಿ ಕಂಪನಿ ನಡೆಸುತ್ತಿದ್ದರು.
ಬೂದು ಬತ್ತಿ, ಮೆಣದ ಬತ್ತಿ, ಅಗರಬತ್ತಿ ಪ್ಯಾಕಿಂಗ್ ಕೆಲಸ ಕೊಡಿಸುವುದಾಗಿ ಆನ್ಲೈನ್ ಮತ್ತು ಪತ್ರಿಕೆಗಳಲ್ಲಿ ಜಾಹೀರಾತು ನೀಡುತ್ತಿದ್ದರು. ಕೆಲಸ ಬೇಕಿರುವವರಿಂದ “ಡಿಪಾಸಿಟ್, ರಿಜಿಸ್ಟ್ರೇಷನ್ ಫೀಸ್, ಮೆಟೀರಿಯಲ್ ಕಾಸ್ಟ್” ಹೆಸರಿನಲ್ಲಿ ಹಣ ಪಡೆಯುತ್ತಿದ್ದರು.
ಮೊದಲು ಸ್ವಲ್ಪ ಪ್ರಮಾಣದ ಸಾಮಗ್ರಿ ಕೊಟ್ಟು ನಂಬಿಕೆ ಗಳಿಸುತ್ತಿದ್ದರು. ಬಳಿಕ ಹೆಚ್ಚಿನ ಹಣ ಹೂಡಿಕೆ ಮಾಡಿಸಿದ ನಂತರ ದಂಪತಿ ನಾಪತ್ತೆಯಾಗುತ್ತಿದ್ದರು.ಈ ರೀತಿಯಾಗಿ ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ಮಹಿಳೆಯರು, ಗೃಹಿಣಿಯರು ಮತ್ತು ನಿರುದ್ಯೋಗಿಗಳಿಂದ ಕೋಟ್ಯಂತರ ರೂ. ವಸೂಲಿ ಮಾಡಿರುವುದು ತನಿಖೆಯಲ್ಲಿ ಬಯಲಾಗಿದೆ. ಅನೇಕರು ಸಾಲ ಮಾಡಿ ಇವರಿಗೆ ಹಣ ಕೊಟ್ಟಿದ್ದರು.
ವಂಚನೆಗೆ ಒಳಗಾದವರ ದೂರಿನ ಮೇರೆಗೆ ದೇವನಹಳ್ಳಿ ಪೊಲೀಸರು ತನಿಖೆ ನಡೆಸಿದರು. ತಾಂತ್ರಿಕ ಮಾಹಿತಿ ಆಧರಿಸಿ ಕಿರಣ್ ಮತ್ತು ಆರತಿ ದಂಪತಿಯನ್ನು ಬಂಧಿಸಿದ್ದಾರೆ.ಪೊಲೀಸರು ಆರೋಪಿಗಳಿಂದ ಲ್ಯಾಪ್ಟಾಪ್, ಮೊಬೈಲ್, ಬ್ಯಾಂಕ್ ಪಾಸ್ಬುಕ್, ಚೆಕ್ಬುಕ್ ಮತ್ತು ವಂಚನೆಗೆ ಬಳಸಿದ್ದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ದಂಪತಿಯಿಂದ ವಂಚನೆಗೆ ಒಳಗಾದವರು ದೇವನಹಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ದೂರು ನೀಡಬಹುದು ಎಂದು ಪೊಲೀಸರು ತಿಳಿಸಿದ್ದಾರೆ.ಮನೆಗೆ ಬಂದು ಕೆಲಸ ಕೊಡಿಸುವುದಾಗಿ ಯಾರಾದರೂ ಹಣ ಕೇಳಿದರೆ ನಂಬಬೇಡಿ ಎಂದು ಜನರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
