ಬೆಂಗಳೂರು-Bengaluruರಾಜ್ಯ-Karnataka

ಬಿಡದಿ ಟೌನ್‌ಶಿಪ್ ಜಟಾಪಟಿ ಮತ್ತೆ ಮುನ್ನೆಲೆಗೆ: ಆಗಸ್ಟ್ 9 ರಿಂದ 11ರವರೆಗೆ ಜೆಡಿಎಸ್ ಪಾದಯಾತ್ರೆ..!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಬಿಡದಿ ಟೌನ್‌ಶಿಪ್ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಈ ಯೋಜನೆಯನ್ನು ವಿರೋಧಿಸಿ ಜೆಡಿಎಸ್ ರಾಜ್ಯಾದ್ಯಂತ ಹೋರಾಟಕ್ಕೆ ಸಜ್ಜಾಗಿದೆ. ಆಗಸ್ಟ್ 9 ರಿಂದ 11ರವರೆಗೆ 3 ದಿನಗಳ ಕಾಲ ಬೃಹತ್ ಪಾದಯಾತ್ರೆ ನಡೆಸಲು ಜೆಡಿಎಸ್ ನಿರ್ಧರಿಸಿದೆ.ಪಾದಯಾತ್ರೆ ಮತ್ತು ಪ್ರತಿಭಟನೆಯ ರೂಪುರೇಷೆಗಳ ಕುರಿತು ಚರ್ಚಿಸಲು ಕೆಲವೇ ಕ್ಷಣಗಳಲ್ಲಿ ಜೆಡಿಎಸ್ ನಾಯಕರ ಮಹತ್ವದ ಸಭೆ ನಡೆಯಲಿದೆ. ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಈ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.

ಸಭೆಯ ನೇತೃತ್ವವನ್ನು ಮಾಜಿ ಸಚಿವ ಸುರೇಶ್ ಬಾಬು ಮತ್ತು ಯುವ ನಾಯಕ ನಿಖಿಲ್ ಕುಮಾರಸ್ವಾಮಿ ವಹಿಸಲಿದ್ದಾರೆ.ಸಭೆಯಲ್ಲಿ ಜೆಡಿಎಸ್‌ನ ಹಾಲಿ ಶಾಸಕರು, ಮಾಜಿ ಸಚಿವರು, ಜಿಲ್ಲಾ ಅಧ್ಯಕ್ಷರು ಮತ್ತು ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ. ಪಾದಯಾತ್ರೆಯ ಮಾರ್ಗ, ಪ್ರತಿಭಟನೆಯ ಸ್ವರೂಪ, ಸರ್ಕಾರದ ಮೇಲೆ ಒತ್ತಡ ತರುವ ವಿಧಾನಗಳ ಕುರಿತು ಸುದೀರ್ಘ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬಿಡದಿ ಟೌನ್‌ಶಿಪ್ ಯೋಜನೆಯಿಂದ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿ ಕಳೆದುಕೊಳ್ಳಲಿದೆ. ರೈತರ ಜೀವನ ಅಸ್ತವ್ಯಸ್ತವಾಗಲಿದೆ ಎಂಬುದೇ ಜೆಡಿಎಸ್‌ನ ಪ್ರಮುಖ ವಾದವಾಗಿದೆ. ಈ ಹಿನ್ನೆಲೆಯಲ್ಲಿ ರೈತರ ಪರವಾಗಿ ಧ್ವನಿ ಎತ್ತಲು, ಸರ್ಕಾರದ ಗಮನ ಸೆಳೆಯಲು ಆಗಸ್ಟ್ 9 ರಿಂದ 11ರವರೆಗೆ ಬಿಡದಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಪಾದಯಾತ್ರೆಯ ದಿನಾಂಕ, ಸಮಯ, ಮಾರ್ಗ ಮತ್ತು ಭಾಗವಹಿಸುವವರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು.

ಪೂರ್ವಭಾವಿ ಸಭೆ ಮುಕ್ತಾಯವಾದ ಬಳಿಕ ಜೆಡಿಎಸ್ ನಾಯಕರು ಮಾಧ್ಯಮಗಳ ಮುಂದೆ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಪಾದಯಾತ್ರೆಯ ವಿವರ ಮತ್ತು ಸರ್ಕಾರಕ್ಕೆ ನೀಡುವ ಎಚ್ಚರಿಕೆಯ ಕುರಿತು ಈ ವೇಳೆ ಮಾಹಿತಿ ನೀಡುವ ನಿರೀಕ್ಷೆ ಇದೆ.ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ರೈತರು ಮತ್ತು ಸ್ಥಳೀಯರು ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಜೆಡಿಎಸ್ ನೇರವಾಗಿ ರಂಗಕ್ಕೆ ಇಳಿದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Share with Friends
author avatar
Digital Desk