Latestರಾಜಕೀಯ | Politics

ಹಂಗಾಮಿ ಸ್ಪೀಕರ್ ಹುದ್ದೆ ತಿರಸ್ಕರಿಸಿದ ಹಿರಿಯ ಶಾಸಕ ಟಿ.ಬಿ. ಜಯಚಂದ್ರ

ಬೆಂಗಳೂರು: ಸಚಿವ ಸಂಪುಟದಲ್ಲಿ ಸ್ಥಾನ ದೊರೆಯದ ಹಿನ್ನೆಲೆ ಕಾಂಗ್ರೆಸ್‌ನ ಹಿರಿಯ ಶಾಸಕ ಟಿ.ಬಿ. ಜಯಚಂದ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಂಗಾಮಿ ಸ್ಪೀಕರ್ ಹುದ್ದೆಯನ್ನು ತಾವು ತಿರಸ್ಕರಿಸಿರುವುದಾಗಿ ಸ್ಪಷ್ಟಪಡಿಸಿರುವ ಅವರು, ಪಕ್ಷದ ಬೆಳವಣಿಗೆಗಳ ಬಗ್ಗೆ ಮುಕ್ತವಾಗಿ ಅಸಮಾಧಾನ ಹೊರಹಾಕಿದರು.

“ಜನತಂತ್ರ ವ್ಯವಸ್ಥೆಯಲ್ಲಿ ಹಲವಾರು ದಾರಿಗಳಿವೆ. ನನಗೆ ಯಾರು ಫೋನ್ ಮಾಡಿಲ್ಲ, ಬರಲೂ ಬೇಕಿಲ್ಲ. ಇದು ನಮ್ಮ ಸರ್ಕಾರ ಅಂತ ಹೇಗೆ ಹೇಳಲಿ, ಇವರನ್ನೆಲ್ಲಾ ನೋಡಿ. ಪಕ್ಷದಲ್ಲಿ ಏನಾಗಿದ್ಯೋ, ಏನಾಗ್ತಿದ್ಯೋ ಗೊತ್ತಿಲ್ಲ,” ಎಂದು ಅವರು ಹೇಳಿದರು.

ತಮ್ಮ ಕ್ಷೇತ್ರದ ಜನರ ಹಿತವೇ ಮೊದಲ ಆದ್ಯತೆ ಎಂದು ಹೇಳಿದ ಜಯಚಂದ್ರ, “ನನ್ನ ಕ್ಷೇತ್ರದ ಜನರಿಗೋಸ್ಕರ ಯಾವ ಮಟ್ಟಕ್ಕೆ ಹೋಗಬೇಕಾದರೂ ನಾನು ಸಿದ್ಧನಿದ್ದೇನೆ. ಹಂಗಾಮಿ ಸ್ಪೀಕರ್ ಹುದ್ದೆಗೆ ನನ್ನ ಸಹಮತಿ ಇಲ್ಲ. ಅದರ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ನಾನು ಬೇಡ ಎಂದು ಹೇಳಿದ್ದೇನೆ,” ಎಂದು ಸ್ಪಷ್ಟಪಡಿಸಿದರು.

ಮುಂದುವರಿದು ಮಾತನಾಡಿದ ಅವರು, “ನಾನು ಒಬ್ಬನೇ ಏಕಾಂಗಿಯಾಗಿ ಹೋರಾಟ ಮಾಡುವ ಶಕ್ತಿ ಹೊಂದಿದ್ದೇನೆ. ನನಗೆ ಜನರ ಮೇಲೆ ನಂಬಿಕೆ ಇದೆ. ನಾನು ರಾಜೀನಾಮೆ ಕೊಡುವಷ್ಟು ಹೇಡಿಯಲ್ಲ,” ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಇದೇ ವೇಳೆ ಪಕ್ಷದೊಳಗಿನ ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಮಾತನಾಡಿದ ಅವರು, “ನಾನು ಕಾಂಗ್ರೆಸ್ ಪಕ್ಷದಲ್ಲೇ ಬೇರೆ ಸ್ಥಾನ ಕೇಳುತ್ತಿದ್ದೇನೆ. ಧೈರ್ಯವಾಗಿ ಮಾತಾಡಲು ಕೂಡ ಖರ್ಚು ಬೇಕಲ್ಲವಾ,” ಎಂದು ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದರು.

ಟಿ.ಬಿ. ಜಯಚಂದ್ರ ಅವರ ಈ ಹೇಳಿಕೆಗಳು ರಾಜ್ಯ ಕಾಂಗ್ರೆಸ್‌ನಲ್ಲಿ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ನಾಯಕತ್ವ ಈ ಅಸಮಾಧಾನವನ್ನು ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

Share with Friends
author avatar
News Desk