Latestರಾಷ್ಟ್ರೀಯ-National

ಐಬಿ ಅಧಿಕಾರಿ ಹತ್ಯೆ ಪ್ರಕರಣ : AAP ನಾಯಕ ತಾಹಿರ್ ಹುಸೇನ್ ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ

ನವದೆಹಲಿ, ಜು.31: 2020ರ ದೆಹಲಿ ಗಲಭೆ ವೇಳೆ ಐಬಿ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದಲ್ಲಿ ದೆಹಲಿಯ ಕರ್ಕರಡೂಮಾ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ಆಮ್ ಆದ್ಮಿ ಪಕ್ಷದ (AAP) ಮಾಜಿ ಕೌನ್ಸಿಲರ್ ತಾಹಿರ್ ಹುಸೇನ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ತೀರ್ಪು ಪ್ರಕಟಿಸಿದ ನ್ಯಾಯಾಲಯ, “ಅಂಕಿತ್ ಶರ್ಮಾ ಹತ್ಯೆ ಅತ್ಯಂತ ಕ್ರೂರ ಹಾಗೂ ಅಮಾನವೀಯ ಕೃತ್ಯವಾಗಿದೆ. ಮೃತದೇಹವನ್ನು ಚರಂಡಿಗೆ ಎಸೆದಿರುವುದು ಪ್ರಕರಣದ ಗಂಭೀರತೆಯನ್ನು ತೋರಿಸುತ್ತದೆ. ಇದು ‘ಅಪರೂಪದಲ್ಲೇ ಅಪರೂಪ’ (Rarest of Rare) ಪ್ರಕರಣಕ್ಕೆ ಸೇರುವಷ್ಟು ಗಂಭೀರವಾಗಿದೆ” ಎಂದು ಅಭಿಪ್ರಾಯಪಟ್ಟಿದೆ. ಆದರೆ ಆರೋಪಿಗಳ ವೈಯಕ್ತಿಕ ಪಾತ್ರ, ಶಿಕ್ಷಣ ಹಾಗೂ ಪ್ರಕರಣದ ಸಂದರ್ಭಗಳನ್ನು ಪರಿಗಣಿಸಿ ಮರಣದಂಡನೆ ಬದಲಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಏನಿದು ಪ್ರಕರಣ?

2020ರ ಫೆಬ್ರವರಿ 25ರಂದು ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ವೇಳೆ 26 ವರ್ಷದ ಐಬಿ ಭದ್ರತಾ ಸಹಾಯಕ ಅಂಕಿತ್ ಶರ್ಮಾ ಅವರು ಎರಡು ಗುಂಪುಗಳ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಮುಂದಾಗಿದ್ದರು. ಇದೇ ವೇಳೆ ಗುಂಪೊಂದು ಅವರನ್ನು ಸುತ್ತುವರಿದು ಚಾಕು, ಕಬ್ಬಿಣದ ರಾಡ್‌, ಕಲ್ಲು ಹಾಗೂ ಕೋಲುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿತ್ತು.

ಬಳಿಕ ಅವರ ಮೃತದೇಹವನ್ನು ಸಮೀಪದ ಚರಂಡಿಗೆ ಎಸೆಯಲಾಗಿತ್ತು. ಮರುದಿನ ಪತ್ತೆಯಾದ ಮೃತದೇಹದಲ್ಲಿ 51 ಚಾಕು ಇರಿತದ ಗಾಯಗಳು ಕಂಡುಬಂದಿದ್ದು, ಪ್ರಕರಣ ದೇಶಾದ್ಯಂತ ಭಾರೀ ಸಂಚಲನ ಮೂಡಿಸಿತ್ತು.

Share with Friends
author avatar
News Desk