
ಭಾರಿ ಮಳೆಗೆ ನಿಡಗುಂದಿ ಪಟ್ಟಣ ಪಂಚಾಯಿತಿ ರಸ್ತೆಗಳು ಕೆಸರು ಗದ್ದೆ..!
ವಿಜಯಪುರ: ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಪಟ್ಟಣ ಪಂಚಾಯಿತಿಯ ವಾರ್ಡ್ ಸಂಖ್ಯೆ 14ರಲ್ಲಿ ಮಂಗಳವಾರ ಬೆಳಗ್ಗೆಯಿಂದ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ವಾರ್ಡಿನ ಎಲ್ಲಾ ರಸ್ತೆಗಳು ಕೆಸರು ಗದ್ದೆಗಳಂತಾಗಿದ್ದು, ಮಕ್ಕಳು, ವಿದ್ಯಾರ್ಥಿಗಳು ಮತ್ತು ಹಿರಿಯರು ಸಂಚರಿಸಲು ಪರದಾಡುವಂತಾಗಿದೆ.
ಎರಡು ವರ್ಷಗಳ ಹಿಂದೆ ನಗರೋತ್ಥಾನ ಇಲಾಖೆಯಿಂದ ಒಳಚರಂಡಿ ಮತ್ತು ಡಾಂಬರೀಕರಣ ರಸ್ತೆ ಕಾಮಗಾರಿಗೆ ಅನುದಾನ ಮಂಜೂರಾಗಿತ್ತು. ಆದರೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಅರ್ಧಕ್ಕೆ ನಿಂತಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ. ಅಗೆದು ಹಾಕಿದ ರಸ್ತೆಗಳು ಮಳೆ ನೀರಿನ ಶೇಖರಣೆಯ ಗುಂಡಿಗಳಾಗಿ ಮಾರ್ಪಟ್ಟಿವೆ.

ಇರಾನ್ ಯುದ್ಧದ ಪರಿಣಾಮವಾಗಿ ತೈಲ ವ್ಯಾಪಾರ ಸ್ಥಗಿತಗೊಂಡ ನಂತರ ಡಾಂಬರೀಕರಣಕ್ಕೆ ಹೊಡೆತ ಬಿದ್ದಿದೆ. ಡಾಂಬರ್ ಸಿಗದ ಕಾರಣ ಕಾಮಗಾರಿ ನೆಲೆಗುದಿಗೆ ಬಿದ್ದಿದೆ ಎಂದು ಅಧಿಕಾರಿಗಳು ತಿಳಿಸುತ್ತಿದ್ದಾರೆ. ಇದರಿಂದ ವಾರ್ಡ್ ನಿವಾಸಿಗಳು ದಿನನಿತ್ಯ ಸಂಕಷ್ಟ ಅನುಭವಿಸುತ್ತಿದ್ದಾರೆ.
“ಮಳೆ ಬಂದರೆ ಮನೆಯಿಂದ ಹೊರಗೆ ಹೋಗಲು ಆಗುವುದಿಲ್ಲ. ಶಾಲಾ ಮಕ್ಕಳು ಬೂಟು ಕೈಯಲ್ಲಿ ಹಿಡಿದು ಹೋಗಬೇಕಾಗಿದೆ. ಎರಡು ವರ್ಷದಿಂದ ಒಂದೇ ಸಮಸ್ಯೆ” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅಪೂರ್ಣ ಕಾಮಗಾರಿಯನ್ನು ಪೂರ್ಣಗೊಳಿಸಿ ರಸ್ತೆ ಮತ್ತು ಒಳಚರಂಡಿ ವ್ಯವಸ್ಥೆ ಮಾಡಿಕೊಡಬೇಕು ಎಂದು ವಾರ್ಡ್ ನಿವಾಸಿಗಳು ನಗರೋತ್ಥಾನ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
