Top Storiesಗದಗ-Gadag

ಚರಂಡಿ ಸ್ವಚ್ಛ ಮಾಡದ ಗ್ರಾ.ಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ: ಪಂಚಾಯತ್ ಎದುರು ಕಸ ಸುರಿದು ಪ್ರತಿಭಟನೆ..!

ಗದಗ: ಗ್ರಾಮದ ಚರಂಡಿ ಮತ್ತು ರಸ್ತೆಗಳನ್ನು ಸ್ವಚ್ಛಗೊಳಿಸದ ಗ್ರಾಮ ಪಂಚಾಯತ್ ಆಡಳಿತದ ವಿರುದ್ಧ ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಸೂಡಿ ಗ್ರಾಮದ ಜನರು ರೊಚ್ಚಿಗೆದ್ದಿದ್ದಾರೆ.

ಸೂಡಿ ಗ್ರಾಮದ ರಾಜೀವಗಾಂಧಿ ನಗರದ ನಿವಾಸಿಗಳು ಕಳೆದ ಒಂದು ವರ್ಷದಿಂದ ಚರಂಡಿ, ರಸ್ತೆ ಸ್ವಚ್ಛಗೊಳಿಸದ ಗ್ರಾಮ ಪಂಚಾಯತ್ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಸ್ತೂರಬಾ ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುತ್ತಲೂ ಕಲುಷಿತ ವಾತಾವರಣ ಉಂಟಾಗಿದ್ದು, ಮಕ್ಕಳ ಆರೋಗ್ಯಕ್ಕೂ ಸಮಸ್ಯೆಯಾಗುತ್ತಿದೆ.

ಚರಂಡಿ ಸ್ವಚ್ಛ ಮಾಡದ ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ ಪಂಚಾಯತ್ ಎದುರು ಕಸ ಸುರಿದು ಪ್ರತಿಭಟನೆ

ಈ ಬಗ್ಗೆ ಹಲವು ಬಾರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು “ಡೊಂಟ್ ಕೇರ್” ಎಂದು ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೇಸತ್ತು ಹೋದ ಗ್ರಾಮಸ್ಥರು ಸ್ವತಃ ಒಟ್ಟುಗೂಡಿ ಜೆಸಿಬಿ ಮೂಲಕ ಚರಂಡಿ ಸ್ವಚ್ಛತೆ ಮಾಡಿದರು. ಆ ಚರಂಡಿಯ ಕಲುಷಿತ ಕಸವನ್ನು ಟ್ರ್ಯಾಕ್ಟರ್‌ನಲ್ಲಿ ತಂದು ನೇರವಾಗಿ ಗ್ರಾಮ ಪಂಚಾಯತ್ ಕಚೇರಿ ಎದುರು ಸುರಿದು ಆಕ್ರೋಶ ಹೊರಹಾಕಿದರು.

“ನಾವು ತೆರಿಗೆ ಕಟ್ಟುತ್ತೇವೆ. ಆದರೂ ಮೂಲಭೂತ ಸೌಲಭ್ಯವೂ ಸಿಗುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ರೋಗಗಳು ಹರಡುವ ಭಯವಿದೆ” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಈ ಪ್ರತಿಭಟನೆಯಿಂದ ಪಂಚಾಯತ್ ಅಧಿಕಾರಿಗಳಿಗೆ ತಣ್ಣೀರಿನಿಂದ ಸ್ನಾನ ಮಾಡಿಸಿದಂತಾಗಿದೆ.

ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಅಧಿಕಾರಿಗಳು ಗ್ರಾಮಸ್ಥರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.

Share with Friends
author avatar
Digital Desk