
ಪತ್ನಿಗೆ ನೇಣು ಬಿಗಿದು ಕೊಂದ ಪತಿ
ಬಾಗಲಕೋಟೆ,ಜು.28: ಪತ್ನಿಗೆ ನೇಣು ಬಿಗಿದು ಆಕೆ ಒದ್ದಾಡುವುದನ್ನು ಅತ್ತೆ ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ ಘಟನೆ ಜಿಲ್ಲೆಯ ಬೀಳಗಿ ತಾಲೂಕಿನ ಗಲಗಲಿ ಗ್ರಾಮದಲ್ಲಿ ನಡೆದಿದೆ.
ಭಾಗ್ಯಶ್ರೀ ಜಿಗಳೂರು (23) ಕೊಲೆಯಾದ ಮಹಿಳೆ. ಆಕೆಯ ಪತಿ ಪ್ರವೀಣ್ ಜಿಗಳೂರು ಹತ್ಯೆಗೈದ ಆರೋಪಿಯಾಗಿದ್ದಾನೆ. ಅನೈತಿಕ ಸಂಬಂಧದ ಅನುಮಾನದ ಮೇಲೆ ಪತ್ನಿ ಮೇಲೆ ಕಟ್ಟಿಗೆಯಿಂದ ಹಲ್ಲೆಗೈದು ಬಳಿಕ ನೇಣು ಬಿಗಿದಿದ್ದ.ಆ ವೇಳೆ ಆಕೆ ಪ್ರಾಣಸಂಕಟದಲ್ಲಿ ಒದ್ದಾಡುವುದನ್ನು ಅತ್ತೆ ಮಾವನಿಗೆ ವಿಡಿಯೋ ಕಾಲ್ ಮಾಡಿ ತೋರಿಸಿದ್ದಾನೆ ಎಂದು ತಿಳಿದು ಬಂದಿದೆ.
ಅಲ್ಲದೇ ಆಕೆ ಒದ್ದಾಡುವುದನ್ನು ವಿಡಿಯೋ ಮಾಡಿದ್ದಾನೆ. ವಿಡಿಯೋದಲ್ಲಿ ನೇಣು ಕುಣಿಕೆ ಹಿಂದೆ ಮದುವೆ ಸಮಯದ ಇಬ್ಬರ ಹೆಸರು ಸಹ ಸೆರೆಯಾಗಿದೆ.
ಪತ್ನಿ ಜಗಳವಾಡಿ ಎರಡು ತಿಂಗಳ ಹಿಂದೆ ತವರುಮನೆ ಮಹಾಲಿಂಗಪುರಕ್ಕೆ ಹೋಗಿದ್ದಳು. ಚೆನ್ನಾಗಿ ಕೂಡಿ ಬಾಳುತ್ತೇವೆ ಎಂದು ಜು.೨೭ ರಂದು ಗಲಗಲಿಗೆ ಕರೆತಂದಿದ್ದ ಪ್ರವೀಣ. ಅದೇ ದಿನ ಸಂಜೆ ಆಕೆಯನ್ನು ಕೊಲೆ ಮಾಡಿದ್ದಾನೆ.
ಸ್ಥಳಕ್ಕೆ ಬೀಳಗಿ ಪೊಲೀಸರು, ಎಸ್‌ಪಿ ಸಿದ್ದಾರ್ಥ್ ಗೋಯೆಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
