
ನೀಟ್ ನೆಪದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ವಿರೋಧ ಪಕ್ಷಗಳ ಯತ್ನ : ವಿಜಯೇಂದ್ರ
ಬೆಂಗಳೂರು.ಜು.23: ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ವಿರೋಧ ಪಕ್ಷಗಳ ಪ್ರತಿಭಟನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನೀಟ್ ಪರೀಕ್ಷೆಯ ಗೊಂದಲವನ್ನು ನೆಪವನ್ನಾಗಿ ಮಾಡಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ವಿರೋಧ ಪಕ್ಷಗಳು ಯತ್ನಿಸುತ್ತಿವೆ ಎಂದು ಆರೋಪಿಸಿದರು.
ನೀಟ್ ಪರೀಕ್ಷೆಯಲ್ಲಿನ ಗೊಂದಲಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತಕ್ಷಣವೇ ಸ್ಪಂದಿಸಿ ಮರುಪರೀಕ್ಷೆ ನಡೆಸುವ ಮೂಲಕ ಪಾರದರ್ಶಕತೆ ಕಾಯ್ದುಕೊಂಡಿದೆ. ಆದರೂ ಕಾಂಗ್ರೆಸ್ ಹಾಗೂ ಅದರ ಮಿತ್ರಪಕ್ಷಗಳು ರಾಜಕೀಯ ಲಾಭಕ್ಕಾಗಿ ಈ ವಿಚಾರವನ್ನು ಬಳಸಿಕೊಳ್ಳುತ್ತಿವೆ ಎಂದು ಅವರು ಟೀಕಿಸಿದರು.
ವಿದ್ಯಾರ್ಥಿಗಳ ಭವಿಷ್ಯವೇ ಕೇಂದ್ರ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಯುವಜನರ ಶಕ್ತಿ ಮತ್ತು ಸಾಮರ್ಥ್ಯದ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಪಾರ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿದರು.
ರಾಹುಲ್ ಗಾಂಧಿ ಭಾರತಕ್ಕೆ ಮರಳಿದ ಬಳಿಕ ಹೈ-ಸೆಕ್ಯುರಿಟಿ ವಲಯದಲ್ಲಿರುವ ಪ್ರಧಾನಮಂತ್ರಿಗಳ ನಿವಾಸದ ಹೊರಗೆ ಧರಣಿ ನಡೆಸಿರುವುದು ಕೇವಲ ಪ್ರಚಾರದ ಗಿಮಿಕ್ ಎಂದು ಅವರು ವ್ಯಂಗ್ಯವಾಡಿದರು.
ನೀಟ್ ಪರೀಕ್ಷೆ ಕುರಿತಂತೆ ಸಂಸತ್ತಿನ ಉಭಯ ಸದನಗಳಲ್ಲಿ ಎಷ್ಟು ಸಮಯ ಬೇಕಾದರೂ ಚರ್ಚೆಗೆ ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಈಗಾಗಲೇ ಸ್ಪಷ್ಟಪಡಿಸಿದೆ. ಆದರೆ ವಿರೋಧ ಪಕ್ಷಗಳು ಚರ್ಚೆಯಿಂದ ಹಿಂದೆ ಸರಿದು ಬೀದಿ ಪ್ರತಿಭಟನೆಗೆ ಮುಂದಾಗಿವೆ ಎಂದು ಅವರು ಆರೋಪಿಸಿದರು.
ಜುಲೈ 20ರಂದು ನಡೆದ ಗಲಭೆಯಲ್ಲಿ 158ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ನಡೆದ ಹಲ್ಲೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ವಿಜಯೇಂದ್ರ ಹೇಳಿದರು. ವಿದ್ಯಾರ್ಥಿಗಳ ಪ್ರತಿಭಟನೆಯ ಹೆಸರಿನಲ್ಲಿ ತುಕಡೆ ಗ್ಯಾಂಗ್ ಹಾಗೂ ಗೂಂಡಾಗಳನ್ನು ನುಗ್ಗಿಸಿ, ಶ್ರೀಲಂಕಾ ಮತ್ತು ನೇಪಾಳದ ಮಾದರಿಯಲ್ಲಿ ಜೆನ್-ಜಿ ಯುವಕರನ್ನು ದುರುಪಯೋಗಪಡಿಸಿಕೊಂಡು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದರು.
ಯುವಜನತೆ ದೇಶದ ಭವಿಷ್ಯವಾಗಿದ್ದು, ವಿರೋಧ ಪಕ್ಷಗಳು ದುಷ್ಟ ರಾಜಕೀಯವನ್ನು ಬದಿಗಿಟ್ಟು ಸಂಸತ್ತಿನ ಅಧಿವೇಶನದಲ್ಲಿ ಸಕಾರಾತ್ಮಕ ಚರ್ಚೆಗೆ ಭಾಗಿಯಾಗಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
