Latestರಾಜಕೀಯ | Politics

“ಕಾಕ್ರೋಚ್‌ ಪಾರ್ಟಿ ಜೊತೆ ರಾಹುಲ್‌ ಗಾಂಧಿ ಮ್ಯಾಚ್‌ ಫಿಕ್ಸಿಂಗ್‌ : ಆರ್‌. ಅಶೋಕ್‌ ಆರೋಪ

ಬೆಂಗಳೂರು.ಜು.23: ನೀಟ್‌ ಪರೀಕ್ಷೆಯಲ್ಲಿನ ಅಕ್ರಮದ ಬಗ್ಗೆ ಲೋಕಸಭೆಯಲ್ಲಿ ಮಾತನಾಡಬೇಕಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅಧಿವೇಶನದಿಂದ ದೂರ ಉಳಿದು “ಕಾಕ್ರೋಚ್‌ ಜನತಾ ಪಾರ್ಟಿ” ಜೊತೆ ಮ್ಯಾಚ್‌ ಫಿಕ್ಸಿಂಗ್‌ ಮಾಡಿಕೊಂಡಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಆ ಪಕ್ಷದವರು ಸಂಧಾನಕ್ಕೆ ಬರುತ್ತಿಲ್ಲ, ರಾಹುಲ್‌ ಗಾಂಧಿ ಅಧಿವೇಶನಕ್ಕೂ ಹಾಜರಾಗುತ್ತಿಲ್ಲ. ನೀಟ್‌ ವಿಚಾರದಲ್ಲಿ ವಿದ್ಯಾರ್ಥಿಗಳ ಪರವಾಗಿ ಮಾತನಾಡುವ ಬದಲು ರಾಜಕೀಯ ಲಾಭಕ್ಕಾಗಿ ನಡೆದುಕೊಳ್ಳುತ್ತಿದ್ದಾರೆ” ಎಂದು ಟೀಕಿಸಿದರು.

ಕಾಕ್ರೋಚ್‌ ಪಾರ್ಟಿಯ ಪ್ರತಿಭಟನೆಯಲ್ಲಿ ಬಾಂಗ್ಲಾದೇಶ ಹಾಗೂ ನೇಪಾಳದಲ್ಲಿ ಕೇಳಿಬಂದ ಘೋಷಣೆಗಳನ್ನೇ ಕೂಗಲಾಗಿದೆ ಎಂದು ಆರೋಪಿಸಿದ ಅಶೋಕ್‌, “ಇದನ್ನು ಆಯೋಜಿಸಿರುವವರು ವಿದೇಶದಲ್ಲಿದ್ದು, ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಾಹುಲ್‌ ಗಾಂಧಿ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ” ಎಂದು ಹೇಳಿದರು.

ನೀಟ್‌ ಪರೀಕ್ಷೆಯಲ್ಲಿ ಅಕ್ರಮದ ಆರೋಪ ಕೇಳಿಬಂದ ತಕ್ಷಣವೇ ಕೇಂದ್ರ ಸರ್ಕಾರ ಯಾವುದೇ ಮುಲಾಜಿಲ್ಲದೆ ತನಿಖೆಗೆ ಆದೇಶಿಸಿ, ಪ್ರಕರಣವನ್ನು ಸಿಬಿಐಗೆ ವಹಿಸಿದೆ. ತಪ್ಪಿತಸ್ಥರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಅವರು ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಕುರಿತು ಟೀಕೆ ಮಾಡುವ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳಬೇಕು ಎಂದು ಅಶೋಕ್‌ ವಾಗ್ದಾಳಿ ನಡೆಸಿದರು.

ಧಾರವಾಡದಲ್ಲಿ ಉದ್ಯೋಗಕ್ಕಾಗಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ನಿರುದ್ಯೋಗಿ ಯುವಕರ ಮೇಲೆ ಲಾಠಿ ಚಾರ್ಜ್ ನಡೆಸಿದವರು ಯಾರು ಎಂದು ಪ್ರಶ್ನಿಸಿದ ಅವರು, “ಉದ್ಯೋಗ ಕೇಳಿದ ಯುವಕರಿಗೆ ಲಾಠಿ ಏಟು ಕೊಟ್ಟ ಸರ್ಕಾರಕ್ಕೆ ಇಂದು ಯುವಕರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?” ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿ ಇದ್ದರೂ ನೇಮಕಾತಿ ನಡೆಯುತ್ತಿಲ್ಲ. ಸ್ಪರ್ಧಾತ್ಮಕ ಪರೀಕ್ಷೆಗಳು ಸಮಯಕ್ಕೆ ನಡೆಯುತ್ತಿಲ್ಲ. ಇದರಿಂದ ಯುವಕರ ಭವಿಷ್ಯ ಅತಂತ್ರವಾಗಿದೆ. ತನ್ನದೇ ರಾಜ್ಯದ ಯುವಕರಿಗೆ ನ್ಯಾಯ ಒದಗಿಸಲಾಗದ ಸರ್ಕಾರ ಇಂದು ದೇಶಕ್ಕೆ ಉಪದೇಶ ನೀಡಲು ಮುಂದಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದರು.

Share with Friends
author avatar
News Desk