
ಸ್ಪೇನ್ ಮುಡಿಗೆ ಫಿಫಾ ವಿಶ್ವಕಪ್ ಗರಿ..ಟೊರೆಸ್ ಬಾರಿಸಿದ ಮಾಂತ್ರಿಕ ಗೋಲು!
ನ್ಯೂಜೆರ್ಸಿ,ಜು.20- ನ್ಯೂಜೆರ್ಸಿಯ ಮೆಟ್ಲೈಫ್ ಸ್ಟೇಡಿಯಂನಲ್ಲಿ ನಡೆದ ಫಿಫಾ ವಿಶ್ವಕಪ್ 2026ರ ರೋಮಾಂಚಕ ಫೈನಲ್ ಪಂದ್ಯದಲ್ಲಿ, ಅರ್ಜೆಂಟೀನಾ ವಿರುದ್ಧ 1-0 ಗೋಲುಗಳ ಅಂತರದಿಂದ ಸ್ಪೇನ್ ಐತಿಹಾಸಿಕ ಜಯ ಸಾಧಿಸಿದೆ.
ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ನಿಗದಿತ 90 ನಿಮಿಷಗಳಲ್ಲಿ ಉಭಯ ತಂಡಗಳು ಯಾವುದೇ ಗೋಲು ಬಾರಿಸಿರಲಿಲ್ಲ. ಆ ಬಳಿಕ ನಡೆದ ಹೆಚ್ಚುವರಿ ನಿಮಿಷದಲ್ಲಿ ಪಂದ್ಯ ಫಲಿತಾಂಶ ನಿರ್ಧಾರವಾಯಿತು.ಹೆಚ್ಚುವರಿ ಸಮಯದ ದ್ವಿತೀಯಾರ್ಧದ ಆರಂಭದಲ್ಲೇ, ಅಂದರೆ ಪಂದ್ಯದ 106ನೇ ನಿಮಿಷದಲ್ಲಿ ಸ್ಪೇನ್ ತಂಡದ ಬದಲಿ ಆಟಗಾರ ಫೆರಾನ್ ಟೊರೆಸ್ ಪಂದ್ಯದ ಏಕೈಕ ಹಾಗೂ ನಿರ್ಣಾಯಕ ಗೋಲು ಬಾರಿಸಿದರು. ಬಾಕ್ಸ್ ಒಳಗೆ ಪುಟಿದು ಬಂದ ಚೆಂಡನ್ನು ನಿಯಂತ್ರಣಕ್ಕೆ ಪಡೆದ ಟೊರೆಸ್, ಎಡಗಾಲಿನಿಂದ ಚೆಂಡನ್ನು ಗೋಲು ಪೆಟ್ಟಿಗೆಯ ಮೇಲ್ಭಾಗಕ್ಕೆ ತಳ್ಳುವ ಮೂಲಕ ಸ್ಪೇನ್ಗೆ ಐತಿಹಾಸಿಕ ಜಯ ತಂದುಕೊಟ್ಟರು.
ಪಂದ್ಯದ 90 ನಿಮಿಷಗಳ ಅವಧಿಯಲ್ಲಿ ಸ್ಪೇನ್ ಬರೋಬ್ಬರಿ 15 ಬಾರಿ ಗೋಲು ಬಾರಿಸಲು ಯತ್ನಿಸಿದರೆ, ಅರ್ಜೆಂಟೀನಾ ಒಂದು ಬಾರಿಯೂ ಯತ್ನಿಸಲಿಲ್ಲ. ಆದರೆ ಅರ್ಜೆಂಟೀನಾದ ಗೋಲ್ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಗೋಡೆಗಿಂತ ಗಟ್ಟಿಯಾಗಿ ನಿಂತು ಸ್ಪೇನ್ನ 10 ಗೋಲುಗಳ ಯತ್ನವನ್ನು ತಡೆದರು. ಇದು ವಿಶ್ವಕಪ್ ಫೈನಲ್ ಇತಿಹಾಸದಲ್ಲೇ ಗೋಲ್ಕೀಪರ್ ಒಬ್ಬರು ಮಾಡಿದ ಅತಿ ಹೆಚ್ಚು ಗೋಲುಗಳ ರಕ್ಷಣೆಯಾಗಿದೆ.

ವಿಶೇಷವಾಗಿ ಇಂಜುರಿ ಟೈಮ್ನಲ್ಲಿ ಲ್ಯಾಮೈನ್ ಯಮಾಲ್ ಅವರ ಅದ್ಭುತ ಫ್ರೀ-ಕಿಕ್ ಅನ್ನು ಮಾರ್ಟಿನೆಜ್ ತಡೆದ ರೀತಿ ಅಮೋಘವಾಗಿತ್ತು.ಲಿಯೋನೆಲ್ ಮೆಸ್ಸಿ ಅವರ ಕೊನೆಯ ವಿಶ್ವಕಪ್ ಪಂದ್ಯ ಇದಾಗಿರಬಹುದು ಎಂಬ ಕಾರಣಕ್ಕೆ ಇಡೀ ಕ್ರೀಡಾಂಗಣ ಅರ್ಜೆಂಟೀನಾ ಪರವಾಗಿತ್ತು. ಆದರೆ, 106ನೇ ನಿಮಿಷದಲ್ಲಿ ಸ್ಪೇನ್ನ ಫೆರಾನ್ ಟೊರೆಸ್ ಬಾರಿಸಿದ ಮಾಂತ್ರಿಕ ಗೋಲು ಪಂದ್ಯದ ಚಿತ್ರಣವನ್ನೇ ಬದಲಿಸಿತು. ಪಂದ್ಯದ ನಂತರ ಭಾವುಕರಾದ ಮೆಸ್ಸಿಯನ್ನು ಸ್ಪೇನ್ ಆಟಗಾರರು ಸಮಾಧಾನಪಡಿಸಿ ಕ್ರೀಡಾಸ್ಫೂರ್ತಿ ಮೆರೆದರು.
ಸ್ಪೇನ್ ಪುರುಷರ ತಂಡ ಗೆದ್ದ ಎರಡನೇ ವಿಶ್ವಕಪ್ ಪ್ರಶಸ್ತಿಯಾಗಿದೆ. ಇದಕ್ಕೂ ಮುನ್ನ 2010 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಮತ್ತೊಮ್ಮೆ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ, ಫುಟ್ಬಾಲ್ ಇತಿಹಾಸದಲ್ಲೇ ಒಂದೇ ಸಮಯದಲ್ಲಿ ಪುರುಷರ ಮತ್ತು ಮಹಿಳೆಯರ (2023) ವಿಶ್ವಕಪ್ ಟ್ರೋಫಿಗಳನ್ನು ಹೊಂದಿರುವ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಸ್ಪೇನ್ ಪಾತ್ರವಾಗಿದೆ.ಮತ್ತೊಂದೆಡೆ, ಈ ಸೋಲಿನೊಂದಿಗೆ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಬೇಕು ಎಂದುಕೊಂಡಿದ್ದ ಅರ್ಜೆಂಟೀನಾ ಕನಸು ಭಗ್ನಗೊಂಡಿದೆ.
ಮತ್ತೊಂದೆಡೆ, ಅರ್ಜೆಂಟೀನಾ ತಮ್ಮ ನಾಲ್ಕನೇ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿದೆ. ಸತತ 2 ಪ್ರಶಸ್ತಿ ಗೆದ್ದ ಇಟಲಿ ಮತ್ತು ಬ್ರೆಜಿಲ್ನ ದಾಖಲೆ ಸರಿಗಟ್ಟುವ ಕನಸು ಭಗ್ನಗೊಂಡಿದೆ. ಫಿಫಾ ವಿಶ್ವಕಪ್ ಇತಿಹಾಸದಲ್ಲಿ ಕೇವಲ ಇಟಲಿ , ಬ್ರೆಝಿಲ್ ತಂಡಗಳು ಮಾತ್ರ ಸತತವಾಗಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇಟಲಿ 1934 ಮತ್ತು 1938ರ ಆವೃತ್ತಿಗಳನ್ನು ಗೆದ್ದರೆ ಬ್ರೆಜಿಲ್ 1958 ಮತ್ತು 1962ರ ಆವೃತ್ತಿಗಳನ್ನು ಗೆದ್ದಿತು. ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿಯ ಮ್ಯಾಜಿಕ್ ಫೈನಲ್ನಲ್ಲಿ ಕೆಲಸ ಮಾಡಲಿಲ್ಲ.
