LatestTop Storiesರಾಷ್ಟ್ರೀಯ-National

ಲಾರಿ ಪಲ್ಟಿಯಾಗಿ ಕಾರಿಗೆ ಡಿಕ್ಕಿ , 6 ಮಂದಿ ಸಜೀವ ದಹನ

ವಾರ್ಧಾ(ಮಹಾರಾಷ್ಟ್ರ) ಜು.20 : ಕಾರಿಗೆ ಲಾರಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ಒಂದೇ ಕುಟುಂಬದ 6 ಮಂದಿ ಸಜೀವ ದಹನವಾದ ಘಟನೆ ವಾರ್ಧಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್ ವೇಯಲ್ಲಿ ಮುಂಜಾನೆ ನಡೆದಿದೆ.

ವಾರ್ಧಾ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್ ವೇಯಲ್ಲಿ ಅಪಘಾತ

ವಾರ್ಧಾದ ಸಾಲೋಡ್ ಗ್ರಾಮದ ನಿವಾಸಿಗಳಾದ ರಾಜೇಶ್ ಟಿಪ್ಲೆ, ಅವರ ಪತ್ನಿ ಸುಷ್ಮಾ ಟಿಪ್ಲೆ, ಪುತ್ರಿ ಜಾಹ್ನವಿ ಟಿಪ್ಲೆ ಹಾಗೂ ಕಾರು ಚಾಲಕ ಅಂಕುಶ್ ರಾವತ್ , ಲಾರಿ ಚಾಲಕ ಸಂಜಯ್ ಕುಮಾರ್ ಮತ್ತು ಕ್ಲೀನರ್ ಸಮರ್ಜಿತ್ ಪಾಲ್ ಮೃತಪಟ್ಟಿದ್ದಾರೆ.

ಎಥೆನಾಲ್ ಸಾಗಿಸುತ್ತಿದ್ದ ಕಂಟೇನರ್ ಲಾರಿಯೊಂದು ಮೊದಲು ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಇಂಧನ ಸೋರಿಕೆಯಾಗಿತ್ತು. ಇದರಿಂದ ವಾಹನಗಳ ಸಂಚಾರವನ್ನು ಇನ್ನೊಂದು ಲೇನ್‌ಗೆ ತಿರುಗಿಸಲಾಗಿತ್ತು. ಈ ವೇಳೆ ಪುಣೆಯಿಂದ ವಾರ್ಧಾಕ್ಕೆ ತೆರಳುತ್ತಿದ್ದ ಕಾರಿಗೆ ಹಿಂಬದಿಯಿಂದ ಅತಿವೇಗವಾಗಿ ಬಂದ ಮೆಣಸಿನಕಾಯಿ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ಲಾರಿಯಡಿ ಸಿಲುಕಿ ನಜ್ಜುಗುಜ್ಜಾಗಿದ್ದು, ಕ್ಷಣಾರ್ಧದಲ್ಲೇ ಎರಡೂ ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿದೆ.

ಸಮೃದ್ಧಿ ಎಕ್ಸ್‌ಪ್ರೆಸ್ ವೇಯಲ್ಲಿ ನಡೆದ ಅಪಘಾತದಲ್ಲಿ 6 ಮಂದಿ ಸಜೀವ ದಹನ

ಇದೇ ವೇಳೆ ಬೆಂಕಿ ವ್ಯಾಪಕವಾಗಿ ಹರಡಿದ ಪರಿಣಾಮ ಕಾರಿನಲ್ಲಿದ್ದ ರಾಜೇಶ್ ಟಿಪ್ಲೆ ಮತ್ತವರ ಕುಟುಂಬದವರು, ಲಾರಿಯ ಚಾಲಕ ಮತ್ತು ಕ್ಲೀನರ್ ಸೇರಿ ಒಟ್ಟು ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಬೆಂಕಿಯ ತೀವ್ರತೆಗೆ ಮೃತದೇಹಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಇನ್ನು ವಿಷಯ ತಿಳಿಯುತ್ತಿದ್ದಂತೆ ವಾರ್ಧಾ ಪೊಲೀಸರು, ಅಗ್ನಿಶಾಮಕ ದಳ ,ಹೆದ್ದಾರಿ ಸುರಕ್ಷತಾ ಪಡೆ ಹಾಗೂ ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು. ಬಳಿಕ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಪುನಃ ಆರಂಭಿಸಲಾಯಿತು.

Share with Friends
author avatar
Digital Desk