
ಕೋಲಾರ ಜಿಲ್ಲೆಯಲ್ಲಿ ರೈತರ ಎಫ್ ಐ ಡಿ ಫಾರ್ಮರ್ ರಿಜಿಸ್ಟ್ರೇಷನ್ ಕ್ಲೋಸ್..!ರೈತ ಪ್ರತಿಭಟನೆ ..!
ಕೋಲಾರ : ಕೋಲಾರ ಜಿಲ್ಲೆಯಲ್ಲಿ ರೈತರ ಎಫ್ಐಡಿ (Farmer ID / ಫಾರ್ಮರ್ ರಿಜಿಸ್ಟ್ರೇಷನ್) ಕ್ಲೋಸ್ ಆಗಿರುವುದರಿಂದ ಉಂಟಾಗಿರುವ ತೀವ್ರ ಸಮಸ್ಯೆಯನ್ನು ಖಂಡಿಸಿ, ಕೋಲಾರ ಡಿಸಿ (DC) ಕಚೇರಿ ಮುಂದೆ ಬೃಹತ್ ರೈತ ಪ್ರತಿಭಟನೆ ನಡೆಯುತ್ತಿದೆ. ಮಾವು ಬೆಳೆಗಾರರ ಜಿಲ್ಲಾ ಅಧ್ಯಕ್ಷ ಚಿನ್ನಪ್ಪ ರೆಡ್ಡಿ ಅವರ ನೇತೃತ್ವದಲ್ಲಿ ಆಯೋಜಿಸಲಾಗಿರುವ ಈ ಬೃಹತ್ ಹೋರಾಟದಲ್ಲಿ ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಮಾಲೂರು, ಬಂಗಾರಪೇಟೆ ಹಾಗೂ ಕೆ.ಜಿ.ಎಫ್ (KGF) ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಸಾವಿರಾರು ರೈತರು ಒಗ್ಗೂಡಿ ಭಾಗವಹಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಸರ್ಕಾರ ದಿಢೀರನೆ ಎಫ್ಐಡಿ ಕ್ಲೋಸ್ ಮಾಡಿರುವುದರಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಪಿಎಂ ಕಿಸಾನ್ ಮತ್ತು ರೈತ ಭಾಗ್ಯ ಯೋಜನೆಗಳ ಹಣ ಸ್ಥಗಿತಗೊಳ್ಳಲಿದ್ದು, ನಷ್ಟಕ್ಕೊಳಗಾದಾಗ ಬೆಳೆ ವಿಮೆ (Crop Insurance) ಕ್ಲೇಮ್ ಮಾಡಲು ಸಾಧ್ಯವಾಗುವುದಿಲ್ಲ.

ಜೊತೆಗೆ ಬೆಂಬಲ ಬೆಲೆ (MSP) ಅಡಿಯಲ್ಲಿ ಮಾವು ಮತ್ತು ಟೊಮ್ಯಾಟೊ ಸೇರಿದಂತೆ ಇತರೆ ಬೆಳೆಗಳನ್ನು ಮಾರಾಟ ಮಾಡಲು ಹಾಗೂ ಸರ್ಕಾರದ ವಿವಿಧ ಸಹಾಯಧನ ಯೋಜನೆಗಳ ಸೌಲಭ್ಯ ಪಡೆಯಲು ಸಾಧ್ಯವಾಗದೇ ರೈತರು ಕಂಗಾಲಾಗಿದ್ದಾರೆ.
ಈ ಎಲ್ಲಾ ಸರ್ಕಾರಿ ಸೌಲಭ್ಯಗಳು ಏಕಾಏಕಿ ನಿಂತು ಹೋಗಿರುವುದರಿಂದ ಆಕ್ರೋಶಗೊಂಡಿರುವ ರೈತ ಸಮುದಾಯವು, ತಮಗೆ ತಕ್ಷಣವೇ ನ್ಯಾಯ ಒದಗಿಸಬೇಕು ಮತ್ತು ಬಂದ್ ಆಗಿರುವ ಎಫ್ಐಡಿಗಳನ್ನು ತಕ್ಷಣವೇ ಪುನರಾರಂಭಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಧರಣಿ ನಡೆಸುತ್ತಿದೆ.
