LatestTop Storiesರಾಷ್ಟ್ರೀಯ-National

ಹುಬ್ಬಳ್ಳಿಯಲ್ಲಿ ಅಪ್ರಾಪ್ತೆಯ ರೇಪ್ ಕೇಸ್ ಮುಚ್ಚಿಹಾಕಿ ಮಗು ಮಾರಾಟ ಮಾಡಿದ ಆರೋಪ..!

ಹುಬ್ಬಳ್ಳಿ: ಅತ್ಯಾಚಾರಕ್ಕೆ ಒಳಗಾಗಿದ್ದ ಅಪ್ರಾಪ್ತ ಬಾಲಕಿಯ ಪ್ರಕರಣವನ್ನು ಮುಚ್ಚಿಹಾಕಿ, ಆಕೆಗೆ ಜನಿಸಿದ ಮಗುವನ್ನು ವೈದ್ಯರೇ ಮಾರಾಟ ಮಾಡಿರುವ ಗಂಭೀರ ಮತ್ತು ಆಘಾತಕಾರಿ ಆರೋಪವೊಂದು ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಡೀ ನಗರವನ್ನು ಬೆಚ್ಚಿಬೀಳಿಸಿದೆ.

೧೫ ವರ್ಷ ೬ ತಿಂಗಳ ಅಪ್ರಾಪ್ತ ಬಾಲಕಿಗೆ ಕರೀಂ ಎಂಬ ಆರೋಪಿ ಪುಸಲಾಯಿಸಿ, ಉಣಕಲ್ಲ ರೈಲ್ವೆ ಬ್ರಿಡ್ಜ್ ಹತ್ತಿರ ಕರೆದುಕೊಂಡು ಹೋಗಿ ೨೦೨೫ರ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಅತ್ಯಾಚಾರ ಎಸಗಿದ್ದ ಎನ್ನಲಾಗಿದೆ. ಬಾಲಕಿ ಗರ್ಭಿಣಿಯಾದ ವಿಷಯ ಆಕೆಯ ತಂದೆ-ತಾಯಿಗೆ ತಿಳಿದಿದ್ದರೂ, ಅವರು ಪೊಲೀಸರಿಗೆ ಮಾಹಿತಿ ನೀಡದೆ ಮರೆಮಾಚಿದ್ದಾರೆ. ಅಷ್ಟೇ ಅಲ್ಲದೆ, ಜನಿಸಿದ ಮಗುವನ್ನು ಬೇರೆಯವರಿಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದೆ. ಇದೀಗ ಸದರಿ ಅಪ್ರಾಪ್ತೆ ಮತ್ತೆ ಗರ್ಭಿಣಿಯಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಾಲಕರಿಂದ ಯಾವುದೇ ಅಧಿಕೃತ ದಾಖಲಾತಿಗಳನ್ನು ಪಡೆಯದೆ ಬಾಲಕಿಗೆ ಚಿಕಿತ್ಸೆ ನೀಡಿರುವ ಚಳ್ಳಮಟ್ಟಿ ಗ್ರಾಮದ ವೈದ್ಯರು ಹಾಗೂ ನಗರದ ಖಾಸಗಿ ಆಸ್ಪತ್ರೆಯ ವೈದ್ಯರು, ಸಂಬಂಧಪಟ್ಟ ಸರ್ಕಾರಿ ಇಲಾಖೆಗಳಿಗೆ ಯಾವುದೇ ಮಾಹಿತಿ ನೀಡದೆ ಅಪರಾಧವನ್ನು ಮರೆಮಾಚಲು ಯತ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿ ಕರೀಂ, ಬಾಲಕಿಯ ತಂದೆ-ತಾಯಿ ಹಾಗೂ ಇಬ್ಬರು ಖಾಸಗಿ ವೈದ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಧಾರವಾಡ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ ಪ್ರಕಾಶ್ ಕೊಡ್ಲಿವಾಡ ಅವರು ದೂರು ದಾಖಲಿಸಿದ್ದಾರೆ.

“ಸದ್ಯ ಘಟನೆಗೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೊಲೀಸರು ಪೋಕ್ಸೋ (POCSO) ಕಾಯ್ದೆ ಹಾಗೂ ಮಾನವ ಕಳ್ಳಸಾಗಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಮತ್ತು ಕರ್ತವ್ಯ ಲೋಪ ಎಸಗಿದ ವೈದ್ಯರ ಪತ್ತೆಗಾಗಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ ಎಂದು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.”

Share with Friends
author avatar
Digital Desk