
‘ಬಾಸ್’ ಸಿನಿಮಾ ವಿರುದ್ಧ ಸಲ್ಲಿಸಿದ್ದ ಅರ್ಜಿ ವಜಾ..!
ಬೆಂಗಳೂರು: ಸ್ಯಾಂಡಲ್‌ವುಡ್ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಹೈಕೋರ್ಟ್‌ನಿಂದ ಭಾರಿ ಹಿನ್ನಡೆಯಾಗಿದೆ. ವಿವಾದಿತ ‘ಬಾಸ್’ ಚಲನಚಿತ್ರದ ಬಿಡುಗಡೆಗೆ ತಡೆ ನೀಡಬೇಕೆಂದು ಕೋರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಹೈಕೋರ್ಟ್ ವಜಾಗೊಳಿಸಿದೆ. ಈ ಆದೇಶದ ಬೆನ್ನಲ್ಲೇ ಯಾವುದೇ ಅಡೆತಡೆಯಿಲ್ಲದೆ ಸಿನಿಮಾ ಇಂದೇ (ಶುಕ್ರವಾರ) ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಲಿದೆ.
ನಟ ದರ್ಶನ್ ಸದ್ಯ ಜೈಲು ಪಾಲಾಗಲು ಕಾರಣವಾದ ಬಹುಚರ್ಚಿತ ‘ರೇಣುಕಾಸ್ವಾಮಿ ಕೊಲೆ ಪ್ರಕರಣ’ದ ಕಥೆಯನ್ನೇ ಆಧರಿಸಿ ಈ ‘ಬಾಸ್’ ಸಿನಿಮಾವನ್ನು ನಿರ್ಮಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಚಿತ್ರದಿಂದ ತಮ್ಮ ವ್ಯಕ್ತಿತ್ವ ಹಾಗೂ ಕಾನೂನು ಹೋರಾಟಕ್ಕೆ ಧಕ್ಕೆಯಾಗುತ್ತದೆ ಎಂದು ಆರೋಪಿಸಿ ದರ್ಶನ್ ಪರವಾಗಿ ಪತ್ನಿ ವಿಜಯಲಕ್ಷ್ಮಿ ಅವರು ಸಿನಿಮಾ ಬಿಡುಗಡೆಗೆ ತಡೆ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಸುದೀರ್ಘ ವಾದ-ಪ್ರತಿವಾದ ಆಲಿಸಿದ ಹೈಕೋರ್ಟ್, ಸಿನಿಮಾ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿತಲ್ಲದೆ, ವಿಜಯಲಕ್ಷ್ಮಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸಂಪೂರ್ಣವಾಗಿ ವಜಾಗೊಳಿಸಿದೆ. ಚಿತ್ರತಂಡ ನಿಗದಿಪಡಿಸಿದಂತೆ ಇಂದೇ ‘ಬಾಸ್’ ಸಿನಿಮಾ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ.
ರೇಣುಕಾಸ್ವಾಮಿ ಕೇಸ್‌ನ ಎಳೆಗಳನ್ನು ಸಿನಿಮಾ ಹೊಂದಿದೆಯೇ ಅಥವಾ ಇಲ್ಲವೇ ಎಂಬ ಕುತೂಹಲ ಸದ್ಯ ಗಾಂಧಿನಗರ ಹಾಗೂ ಪ್ರೇಕ್ಷಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಕಾನೂನು ಹೋರಾಟದಲ್ಲಿ ಹಿನ್ನಡೆ ಅನುಭವಿಸಿರುವ ದರ್ಶನ್ ಕುಟುಂಬಕ್ಕೆ ಈ ಚಿತ್ರದ ಬಿಡುಗಡೆ ಮತ್ತಷ್ಟು ತಲೆನೋವು ತರುತ್ತಾ ಅಥವಾ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ.
