
ಬಿಡದಿ ಟೌನ್ಶಿಪ್ ..ಕಾಂಗ್ರೆನ ಹೊಸ ನಾಟಕ ಶುರು ಎಂದ ಕಮಲ ಪಡೆ!
ಬೆಂಗಳೂರು, ಜು.15: ಬಿಡದಿ ಟೌನ್ಶಿಪ್ ಯೋಜನೆ ಕೈ ಬಿಡದ ಕಾಂಗ್ರೆಸ್ ಸರ್ಕಾರ ಸಮಿತಿ ರಚಿಸುವ ಹೊಸ ನಾಟಕ ಮಾಡಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜನರ ಸಿಂಪತಿ ಗಿಟ್ಟಿಸುವ ನಾಟಕ ಮಾಡುತ್ತಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಎಂದಿಗೂ ಸ್ವಾಧೀನಕ್ಕೆ ಆದೇಶ ಹೊರಡಿಸಿರಲಿಲ್ಲ, ಕಾಂಗ್ರೆಸ್ ಕೂಡ ಯೋಜನೆಯನ್ನು ವಿರೋಧ ಮಾಡಿತ್ತು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಕಿಡಿಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಡದಿ ಟೌನ್ಶಿಪ್ ವಿರುದ್ಧ ರೈತರು ಉಗ್ರ ಹೋರಾಟ ಮಾಡುತ್ತಿದ್ದರೂ ಸರ್ಕಾರ ಪೊಲೀಸರನ್ನು ಕಳಿಸಿ ಹಲ್ಲೆ ಮಾಡಿದೆ. ಕೊಲೆ, ಬೆದರಿಕೆ ಎಂಬುದಾಗಿ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಈಗ ಇದಕ್ಕಾಗಿ ಸದನ ಸಮಿತಿ ನೇಮಿಸಿರುವುದು ಹಾಸ್ಯಾಸ್ಪದವಾಗಿದೆ. ರೈತರು ಜಮೀನು ಕೊಡುವುದಿಲ್ಲ ಎಂದಮೇಲೂ ಸದನ ಸಮಿತಿ ಅಗತ್ಯವಿರಲಿಲ್ಲ. ಆದರೆ ಅಧಿವೇಶನ ನಡೆಯಲಿರುವುದರಿಂದ, ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಮಾಡಲಾಗಿದೆ ಎಂದರು.
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಈ ಹಿಂದೆ ಯೋಜನೆ ಬಗ್ಗೆ ಪ್ರಸ್ತಾಪಿಸಿದ್ದರೇ ಹೊರತು, ಆದೇಶ ಮಾಡಿರಲಿಲ್ಲ. ಅವರು ಪ್ರೊಸೀಡಿಂಗ್ಸ್ ಮಾತ್ರ ಮಾಡಿದ್ದರು. ಈ ಬಗ್ಗೆ ಆರೋಪ ಮಾಡುವವರು ಸರಿಯಾಗಿ ವಿವರಣೆ ನೀಡಬೇಕು. ಇದು ಕುಮಾರಸ್ವಾಮಿಯವರ ಕನಸಿನ ಕೂಸು ಎಂದು ಅಪಪ್ರಚಾರ ಮಾಡುವವರು ಈ ಬಗ್ಗೆ ದಾಖಲೆ ನೀಡಬೇಕು ಎಂದು ಆಗ್ರಹಿಸಿದರು.
ಇನ್ನು ಬಿಡದಿಯಲ್ಲಿ ಪ್ರತಿಭಟನೆ ಆರಂಭವಾಗಿ 435 ದಿನವಾದರೂ ಸರ್ಕಾರ ಸಮಿತಿ ರಚಿಸಲಿಲ್ಲ. ಅಧಿವೇಶನ ಮುಗಿದ ಮೇಲೆ ಸಮಿತಿ ವರದಿ ಕೊಡಲಿದದೆ. ಆಮೇಲೆ ಮತ್ತೆ ಸ್ವಾಧೀನ ನಡೆಯಲಿದೆ. ರಾತ್ರಿ ಸ್ವಾಧೀನಕ್ಕೆ ಆದೇಶ ಹೊರಡಿಸಿ ಬೆಳಗ್ಗೆ ಮುಖ್ಯಮಂತ್ರಿ ಮಾತಾಡುತ್ತಾರೆ. ಈ ಸಮಿತಿಗೆ ಅರ್ಥ ಏನಿದೆ? ಆರ್ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ತಪ್ಪಿತಸ್ಥರನ್ನು ಶಿಕ್ಷಿಸುತ್ತೇವೆಂದು ನಂತರ ಎಲ್ಲರಿಗೂ ಕ್ಲೀನ್ ಚಿಟ್ ನೀಡಲಾಗಿದೆ. ಅದೇ ರೀತಿ ಇಲ್ಲೂ ಮಾಡುತ್ತಾರೆ. ಎರಡು ತಿಂಗಳಲ್ಲಿ ಈ ಸಮಿತಿ ವರದಿ ನೀಡಲಿದೆ. ಇದೊಂದು ನಾಟಕ ಎಂದರು.
ಜನರ ಹೋರಾಟದ ಮುಂದೆ ಯಾರೂ ದೊಡ್ಡವರಲ್ಲ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ಜನಾಕ್ರೋಶಕ್ಕೆ ತುತ್ತಾಗಿ ಹೊರಟುಹೋಯಿತು. ಅದೇ ರೀತಿ ಕಾಂಗ್ರೆಸ್ಗೂ ಆಗಲಿದೆ. ಇದು ಕಾಂಗ್ರೆಸ್ ಸರ್ಕಾರದ ಶವ ಪೆಟ್ಟಿಗೆಯ ಕೊನೆಯ ಮೊಳೆ ಆಗಲಿದೆ. ಡಿನೋಟಿಫಿಕೇಶನ್ ಮೂಲಕ ಜೈಲಿಗೆ ಕಳಿಸುವ ಪ್ರಯತ್ನ ನಡೆದಿದೆ ಎಂದು ಸಿಎಂ ಹೇಳಿದ್ದಾರೆ. ಡೀನೋಟಿಫಿಕೇಶನ್ ಮಾಡಿ ಎಂದು ನಾವ್ಯಾರೂ ಆಗ್ರಹಿಸುತ್ತಿಲ್ಲ. ರೈತರನ್ನು ಅವರ ಪಾಡಿಗೆ ಬಿಟ್ಟರೆ ಸಾಕು. ಮುಂದೆ ಬರುವ ಸರ್ಕಾರ ಅದನ್ನು ನಿಭಾಯಿಸಲಿದೆ ಎಂದರು.
