LatestTop Storiesವಾಣಿಜ್ಯವಿದೇಶ-International

ಕಚ್ಚಾ ತೈಲ ಬೆಲೆ ಶೇ. 8ರಷ್ಟು ಭಾರಿ ಏರಿಕೆ!

ವಾಷಿಂಗ್ಟನ್/ತೆಹರಾನ್,ಜು.14 : ಅಮೆರಿಕ ಮತ್ತು ಇರಾನ್ ನಡುವಿನ ಸೈನಿಕ ಸಂಘರ್ಷ ತಾರಕಕ್ಕೇರಿರುವ ಹಿನ್ನೆಲೆಯಲ್ಲಿ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು,ಕಚ್ಚಾ ತೈಲದ ಬೆಲೆಗಳು ಒಂದೇ ದಿನದಲ್ಲಿ ಶೇಕಡಾ 8 ಕ್ಕಿಂತಲೂ ಹೆಚ್ಚು ಜಿಗಿತ ಕಂಡಿವೆ.

ಮಧ್ಯಪ್ರಾಚ್ಯದಿಂದ ಜಾಗತಿಕ ತೈಲ ಪೂರೈಕೆಯಲ್ಲಿ ಭಾರಿ ವ್ಯತ್ಯಯ ಉಂಟಾಗಬಹುದು ಎಂಬ ಭೀತಿಯಿಂದಾಗಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 80 ಡಾಲರ್ ದಾಟಿ ವಹಿವಾಟು ನಡೆಸುತ್ತಿದೆ. ಅಲ್ಲದೆ, ಅಮೆರಿಕದ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೆಟ್ ತೈಲದ ದರದಲ್ಲೂ ಭಾರಿ ಏರಿಕೆ ದಾಖಲಾಗಿದೆ.

ಇರಾನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ಅಮೆರಿಕ ಪುನರಾರಂಭಿಸಿದೆ ಎಂದು ಡೊನಾಲ್ಡ್ ಟ್ರಂಪ್ ಅಲ್ಲಿನ ಸಂಸತ್ತಿಗೆ ಅಧಿಕೃತವಾಗಿ ತಿಳಿಸಿದ್ದಾರೆ. ಈ ಪ್ರಕಟಣೆಯ ಬೆನ್ನಲ್ಲೇ ತೈಲ ಉತ್ಪಾದನಾ ಕೇಂದ್ರಗಳು ಮತ್ತು ಪ್ರಮುಖ ಹಡಗು ಸಾರಿಗೆ ಮಾರ್ಗಗಳ ಮೇಲೆ ಯುದ್ಧದ ಕರಿನೆರಳು ಆವರಿಸಿದೆ.

ವಿಶ್ವದ ಅತ್ಯಂತ ಪ್ರಮುಖ ಇಂಧನ ಸಾಗಣೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಸದ್ಯ ತೈಲ ಮಾರುಕಟ್ಟೆಯ ಆತಂಕಕ್ಕೆ ಮುಖ್ಯ ಕಾರಣವಾಗಿದೆ. ಜಗತ್ತಿನ ಒಟ್ಟು ತೈಲ ಪೂರೈಕೆಯ ಸುಮಾರು ಐದನೇ ಒಂದು ಭಾಗ (ಶೇ. 20) ಈ ಕಿರಿದಾದ ಜಲಮಾರ್ಗದ ಮೂಲಕವೇ ಹಾದುಹೋಗುತ್ತದೆ. ಈ ಮಾರ್ಗದಲ್ಲಿ ಸರಕು ಸಾಗಣೆಗೆ ಅಡ್ಡಿಯಾದರೆ ಜಾಗತಿಕವಾಗಿ ತೈಲ ಅಭಾವ ಸೃಷ್ಟಿಯಾಗಲಿದ್ದು, ಬೆಲೆಗಳು ಮತ್ತಷ್ಟು ಗಗನಕ್ಕೇರಲಿವೆ ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ತೈಲ ದರ ಏರಿಕೆಯಿಂದಾಗಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಏರುಪೇರು ಉಂಟಾಗಿದ್ದು, ಹೂಡಿಕೆದಾರರು ಸುರಕ್ಷಿತ ಹೂಡಿಕೆ ಮೂಲಗಳಾದ ಚಿನ್ನ ಮತ್ತು ಅಮೆರಿಕನ್ ಡಾಲರ್‌ನತ್ತ ಮುಖ ಮಾಡುತ್ತಿದ್ದಾರೆ.

ಇಂಧನ ದರ ಏರಿಕೆಯ ನೇರ ಹೊಡೆತಕ್ಕೆ ವಿಮಾನಯಾನ ಸಂಸ್ಥೆಗಳು ಸಿಲುಕಲಿದ್ದು,ಉತ್ಪಾದನಾ ವಲಯದ ಷೇರುಗಳು ಭಾರಿ ಕುಸಿತ ಕಂಡಿವೆ.ಸದ್ಯಕ್ಕೆ ಜಾಗತಿಕವಾಗಿ ಕಚ್ಚಾ ತೈಲದ ದಾಸ್ತಾನು ಲಭ್ಯವಿದ್ದರೂ, ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ದೀರ್ಘಕಾಲ ಮುಂದುವರಿದರೆ ಮುಂಬರುವ ವಾರಗಳಲ್ಲಿ ಇಂಧನ ಮಾರುಕಟ್ಟೆ ಮತ್ತಷ್ಟು ಅಸ್ಥಿರಗೊಳ್ಳುವ ಸಾಧ್ಯತೆ ದಟ್ಟವಾಗಿದೆ.

Share with Friends
author avatar
Digital Desk