LatestTop Storiesವಿದೇಶ-International

ಹಾರ್ಮುಜ್ ಜಲಸಂಧಿ ಮತ್ತೆ ಬಂದ್

ವಾಷಿಂಗ್ಟನ್ .ಜು12: ಜಾಗತಿಕ ವ್ಯಾಪಾರ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ನೌಕೆಯೊಂದರ ಮೇಲೆ ಇರಾನ್ ಪಡೆಗಳು ದಾಳಿ ನಡೆಸಿದ ಬೆನ್ನಲ್ಲೇ, ಅಮೆರಿಕ ಸೇನೆಯು ಇರಾನ್ ಮೇಲಿನ ತನ್ನ ದಾಳಿ ತೀವ್ರಗೊಳಿಸಿದೆ.

ಇದಕ್ಕೆ ಪ್ರತಿಯಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಪ್ರಮುಖ ಸಮುದ್ರ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು ಅನಿರ್ದಿಷ್ಟಾವಧಿಗೆ ಮುಚ್ಚಿರುವುದಾಗಿ ಘೋಷಿಸಿದೆ.ಇದು ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ.

ಸೈಪ್ರಸ್ ಧ್ವಜ ಹೊತ್ತ ವಾಣಿಜ್ಯ ನೌಕೆಯು ನಿಯಮಾವಳಿಗಳನ್ನು ಉಲ್ಲಂಘಿಸಿ, ತನ್ನ ಸಂವಹನ ವ್ಯವಸ್ಥೆಯನ್ನು ಸ್ಥಗಿತಗೊಳಿಸಿ ಇರಾನ್ ಜಲಪ್ರದೇಶದ ಮಾರ್ಗವಾಗಿ ಸಾಗುತ್ತಿತ್ತು ಎಂದು ಇರಾನ್ ಅಧಿಕಾರಿಗಳು ಆರೋಪಿಸಿದ್ದಾರೆ. ಅಲ್ಲದೆ, ತಡೆ ರಹಿತವಾಗಿ ಸಾಗುತ್ತಿದ್ದ ನೌಕೆಯ ಇಂಜಿನ್ ರೂಮ್ ಮೇಲೆ ಇರಾನ್ ನೌಕಾಪಡೆ ಕ್ರೂಸ್ ಕ್ಷಿಪಣಿ ದಾಳಿ ನಡೆಸಿದ್ದು, ಹಡಗು ತೀವ್ರ ಹಾನಿಗೊಳಗಾಗಿದೆ. ಘಟನೆಯಲ್ಲಿ ಓರ್ವ ನಾಗರಿಕ ಸಿಬ್ಬಂದಿ ನಾಪತ್ತೆಯಾಗಿದ್ದಾರೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಈ ವಾರದಲ್ಲಿ ಅಮೆರಿಕ ನಡೆಸಿದ ಮೂರನೇ ಸುತ್ತಿನ ಪ್ರತೀಕಾರದ ವಾಯುದಾಳಿ ಇದಾಗಿದೆ.ಇರಾನ್‌ಗೆ ಅಂತಾರಾಷ್ಟ್ರೀಯ ನಿಯಮಗಳನ್ನು ಪಾಲಿಸಲು ಮತ್ತೊಂದು ಅವಕಾಶ ನೀಡಲಾಗಿತ್ತು. ಆದರೆ ಅದು ಮತ್ತೆ ವಿಫಲವಾಗಿದೆ.

ಕಳೆದ ವಾರ ಓಮನ್ ಸಮುದ್ರ ಮಾರ್ಗದಲ್ಲಿ ಮೂರು ತೈಲ ಟ್ಯಾಂಕರ್‌ಗಳ ಮೇಲೆ ನಡೆದ ದಾಳಿಯ ನಂತರ ಉಭಯ ದೇಶಗಳ ನಡುವೆ ಸಂಘರ್ಷ ಆರಂಭವಾಗಿತ್ತು. ಅಮೆರಿಕದ ದಾಳಿಯಲ್ಲಿ ಇರಾನ್‌ನ 17 ಮಂದಿ ಸಾವನ್ನಪ್ಪಿದ್ದು, 115 ಜನರು ಗಾಯಗೊಂಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಸರಣಿ ದಾಳಿಗಳಿಂದಾಗಿ ಕದನ ವಿರಾಮವು ಅಧಿಕೃತವಾಗಿ ಅಂತ್ಯಗೊಂಡಿದೆ .ಆದಾಗ್ಯೂ, ಸಂಧಾನಕಾರರ ಮೂಲಕ ಮಾತುಕತೆಗಳು ಮುಂದುವರಿಯಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ನಡುವೆ ಇರಾನ್‌ನ ನೂತನ ಸುಪ್ರೀಂ ಲೀಡರ್ ಆಗಿ ಅಧಿಕಾರ ವಹಿಸಿಕೊಂಡಿರುವ ಆಯತೊಲ್ಲಾ ಅಲಿ ಖಮೇನಿ ಪುತ್ರ ಆಯತೊಲ್ಲಾ ಮೊಜ್ತಬಾ ಖಮೇನಿ, ಅಮೆರಿಕ ವಿರುದ್ಧ ಸೇಡು ತೀರಿಸಿಕೊಳ್ಳುವುದು ಇಡೀ ದೇಶದ ಸಂಕಲ್ಪವಾಗಿದೆ ಎಂದು ಸರ್ಕಾರಿ ದೂರದರ್ಶನದ ಮೂಲಕ ಲಿಖಿತ ಸಂದೇಶ ನೀಡಿದ್ದಾರೆ. ನಮ್ಮ ನಾಯಕರ ಮತ್ತು ಹುತಾತ್ಮರ ರಕ್ತಕ್ಕೆ ಕ್ರಿಮಿನಲ್ ಕೊಲೆಗಡುಕರಿಂದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ ಎಂದು ಗುಡುಗಿದ್ದಾರೆ.

ಇದೇ ವೇಳೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಹತ್ಯೆ ಮಾಡಲು ಇರಾನ್ ಸಂಚು ರೂಪಿಸಿದೆ ಎಂಬ ಇಸ್ರೇಲಿ ಗುಪ್ತಚರ ವರದಿಯನ್ನು ಯುಎಸ್ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಖಡಕ್ ಎಚ್ಚರಿಕೆ ನೀಡಿರುವ ಟ್ರಂಪ್, ಅಮೆರಿಕದ ಅಧ್ಯಕ್ಷರ ಮೇಲೆ ದಾಳಿ ನಡೆಸಲು ಯತ್ನಿಸಿದರೆ ಇರಾನ್‌ನ ಎಲ್ಲಾ ಪ್ರದೇಶಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸುವುದಾಗಿ ಎಚ್ಚರಿಸಿದ್ದಾರೆ. ಸದ್ಯ ಕತಾರ್ ನಿಯೋಗವು ಮಧ್ಯಸ್ಥಿಕೆ ವಹಿಸಲು ಇರಾನ್‌ಗೆ ಭೇಟಿ ನೀಡಿದ್ದು, ಉದ್ವಿಗ್ನತೆ ಶಮನಗೊಳಿಸಲು ರಾಜತಾಂತ್ರಿಕ ಪ್ರಯತ್ನಗಳು ಜಾರಿಯಲ್ಲಿವೆ.

Share with Friends
author avatar
Digital Desk