LatestTop StoriesWeatherವಿದೇಶ-International

ಚೀನಾ ಕರಾವಳಿಗೆ ಅಪ್ಪಳಿಸಿದ ’ಬಾವಿ’ ಚಂಡಮಾರುತ..20 ಲಕ್ಷ ಜನರ ಸ್ಥಳಾಂತರ

ಬೀಜಿಂಗ್,ಜು12: ಒಂದು ವಾರದ ಅವಧಿಯಲ್ಲಿ ಚೀನಾ ದೇಶಕ್ಕೆ ಎರಡನೇ ಬಾರಿಗೆ ಭೀಕರ ಚಂಡಮಾರುತದ ಆಘಾತ ಎದುರಾಗಿದೆ. ಪೆಸಿಫಿಕ್ ಮಹಾಸಾಗರದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿದ್ದ ಪ್ರಬಲ ’ಬಾವಿ’ ಚಂಡಮಾರುತವು ಚೀನಾದ ಕರಾವಳಿ ಭಾಗಕ್ಕೆ ಅಪ್ಪಳಿಸಿದೆ.

ಚೀನಾ ದೇಶಕ್ಕೆ ಎರಡನೇ ಬಾರಿಗೆ ಭೀಕರ ಚಂಡಮಾರುತದ ಆಘಾತ

ಸುರಕ್ಷತೆ ಹಾಗೂ ಮುಂಜಾಗ್ರತಾ ಕ್ರಮವಾಗಿ ದೇಶದ ಕರಾವಳಿ ಭಾಗದ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಸುಮಾರು 1.000 ಕಿಲೋ ಮೀಟರ್ ವಿಸ್ತೀರ್ಣವನ್ನು ಹೊಂದಿರುವ ಈ ದೈತ್ಯ ಚಂಡಮಾರುತವು ಚೀನಾದ ತೈಝೌ ನಗರಕ್ಕೆ ಪ್ರವೇಶಿಸಿತು.

ನಂತರ 10 ಮಿಲಿಯನ್ (1 ಕೋಟಿ) ಜನಸಂಖ್ಯೆ ಹೊಂದಿರುವ ಪ್ರಮುಖ ನಗರವಾದ ’ವೆನ್‌ಝೌ’ ಕರಾವಳಿಯನ್ನು ದಾಟಿದೆ.ಚೀನಾಕ್ಕೆ ಅಪ್ಪಳಿಸುವ ಮುನ್ನ ’ಬಾವಿ’ ಚಂಡಮಾರುತವು ಪೆಸಿಫಿಕ್ ಮಹಾಸಾಗರದ ದ್ವೀಪಗಳಲ್ಲಿ ಭಾರಿ ಅವಾಂತರ ಸೃಷ್ಟಿಸಿದೆ.

ಜಪಾನ್‌ನ ಒಕಿನಾವಾ ಹಾಗೂ ಸಾಕಿಶಿಮಾ ದ್ವೀಪಗಳಲ್ಲಿ ಗಂಟೆಗೆ 144 ಕಿ.ಮೀ ವೇಗದ ಗಾಳಿಯೊಂದಿಗೆ ಮಳೆ ಸುರಿದಿದ್ದು,ಸಾವಿರಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ತೈವಾನ್‌ನಲ್ಲಿ 1 ಮೀಟರ್‌ವರೆಗೂ (39 ಇಂಚು) ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಭೂಕುಸಿತದ ಭೀತಿ ಎದುರಾಗಿದೆ.
ಚಂಡಮಾರುತವು ಭೂಮಿಗೆ ಅಪ್ಪಳಿಸಿದ ನಂತರ ಸ್ವಲ್ಪ ದುರ್ಬಲಗೊಂಡಿದ್ದರೂ, ಅದರ ಮೋಡಗಳಲ್ಲಿ ಅಪಾರ ಪ್ರಮಾಣದ ತೇವಾಂಶ ಇರುವುದರಿಂದ ಪೂರ್ವ ಚೀನಾದ ಝೆಜಿಯಾಂಗ್ ಮತ್ತು ಫುಜಿಯನ್ ಪ್ರಾಂತ್ಯಗಳಲ್ಲಿ ಅತಿ ಭೀಕರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಸುಮಾರು 400ಕ್ಕೂ ಹೆಚ್ಚು ವಿಮಾನ ಯಾನಗಳು ಹಾಗೂ ಹತ್ತಾರು ರೈಲು ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳು, ಕಚೇರಿಗಳು ಹಾಗೂ ಹೊರಾಂಗಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ರಾಜಧಾನಿ ಬೀಜಿಂಗ್‌ನಲ್ಲೂ ಮುನ್ನೆಚ್ಚರಿಕೆ ವಹಿಸಲಾಗಿದ್ದು,ಅಪಾಯದ ಮುನ್ಸೂಚನೆಯಾಗಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ.

ಕಳೆದ ವಾರವಷ್ಟೇ ದಕ್ಷಿಣ ಚೀನಾಕ್ಕೆ ಅಪ್ಪಳಿಸಿದ್ದ ’ಮೈಸಾಕ್ ಚಂಡಮಾರುತದ ಭೀಕರತೆಯಿಂದ ಚೀನಾ ಇನ್ನೂ ಚೇತರಿಸಿಕೊಂಡಿಲ್ಲ. ಮೈಸಾಕ್ ಚಂಡಮಾರುತಕ್ಕೆ ಕನಿಷ್ಠ 39 ಜನರು ಬಲಿಯಾಗಿದ್ದು, ಕೃಷಿ ವಲಯಕ್ಕೆ ಭಾರಿ ಹಾನಿಯಾಗಿತ್ತು. ಅಲ್ಲದೆ ಸೆಂಟ್ರಲ್ ಹೂಬೈ ಪ್ರಾಂತ್ಯದಲ್ಲಿ ಅತಿ ಅಪರೂಪದ ಸುಂಟರಗಾಳಿಗಳು ಸೃಷ್ಟಿಯಾಗಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈಗ ’ಬಾವಿ’ ಚಂಡಮಾರುತವು ಮತ್ತೆ ಆತಂಕ ಮೂಡಿಸಿದ್ದು, ಚೀನಾ ಸರ್ಕಾರವು ಯುದ್ಧೋಪಾದಿಯಲ್ಲಿ ಪರಿಹಾರ ಕಾರ್ಯ ಕೈಗೊಂಡಿದೆ.

Share with Friends
author avatar
Digital Desk