
ದೇಶದಾದ್ಯಂತ ಮುಂಗಾರು ಮಳೆಗೆ ಬಿಡುವು
ನವದೆಹಲಿ.ಜು11: ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿದು ದೇಶದಾದ್ಯಂತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಮುಂಗಾರು ಮಳೆ ಈಗ ದಿಢೀರ್ ಬಿಡುವು ನೀಡಲು ಸಜ್ಜಾಗಿದೆ.
ಮುಂದಿನ ದಿನಗಳಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಮಳೆ ಕಡಿಮೆಯಾಗಲಿದ್ದು, ಬಿಸಿಲು ಮತ್ತು ವಿಪರೀತ ಸೆಕೆ (ಉಷ್ಣಾಂಶ) ಜನರನ್ನು ಕಂಗಾಲು ಮಾಡಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಜೂನ್ ತಿಂಗಳು ಕಳೆದ 126 ವರ್ಷಗಳಲ್ಲೇ 5ನೇ ಅತ್ಯಂತ ಒಣ ಹವೆಯ ತಿಂಗಳಾಗಿತ್ತು. ಆದರೆ ಜುಲೈ ಆರಂಭದಲ್ಲಿ ಸತತ 9 ದಿನಗಳ ಕಾಲ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರಿಂದ ಮುಂಗಾರು ಚೇತರಿಸಿಕೊಂಡಿತ್ತು. ಆದರೆ ಹವಾಮಾನ ತಜ್ಞರ ಪ್ರಕಾರ, ಮುಂಗಾರು ಮಳೆಯ ಮಾರುತಗಳ ಅಕ್ಷರೇಖೆಯು ಈಗ ಹಿಮಾಲಯದ ತಪ್ಪಲಿನತ್ತ ಮುಖ ಮಾಡಿದೆ. ಇದರ ಪರಿಣಾಮವಾಗಿ ಪಶ್ಚಿಮದಿಂದ ಬೀಸುವ ಒಣ ಗಾಳಿಯು ದೇಶದ ಒಳಭಾಗಕ್ಕೆ ಪ್ರವೇಶಿಸಲಿದ್ದು, ಮುಂದಿನ 5 ರಿಂದ 7 ದಿನಗಳ ಕಾಲ ಮಳೆಯ ತೀವ್ರತೆ ಸಂಪೂರ್ಣವಾಗಿ ಕ್ಷೀಣಿಸಲಿದೆ.

ಮಳೆ ನಿಂತರೂ ವಾತಾವರಣದಲ್ಲಿ ತೇವಾಂಶ ಹೆಚ್ಚಿರುವುದರಿಂದ ತೀವ್ರ ಉಸಿರು ಕಟ್ಟುವ ವಾತಾವರಣ ನಿರ್ಮಾಣವಾಗಲಿದೆ. ದೆಹಲಿ, ಹರಿಯಾಣ, ಪಂಜಾಬ್, ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಹಾಗೂ ಮಹಾರಾಷ್ಟ್ರದಲ್ಲಿ ಮಳೆ ಸಂಪೂರ್ಣ ನಿಲ್ಲಲಿದ್ದು, ಬಿಸಿಲು ಹೆಚ್ಚಾಗಲಿದೆ. ವಾತಾವರಣದ ತೇವಾಂಶ ಮತ್ತು ಬಿಸಿಲಿನ ತಾಪ ಸೇರಿ ಸಾರ್ವಜನಿಕರಿಗೆ ಹೆಚ್ಚಿನ ಉಷ್ಣಾಂಶದ ಅನುಭವವಾಗಲಿದ್ದು ಮೈ ಸುಡುವ ಸೆಕೆ ತಲೆದೋರಲಿದೆ.
ಮುಂಗಾರು ಅಕ್ಷರೇಖೆಯು ಹಿಮಾಲಯದ ಕಡೆಗೆ ಚಲಿಸಿರುವುದರಿಂದ ಅದರ ಹತ್ತಿರವಿರುವ ರಾಜ್ಯಗಳಾದ ಉತ್ತರಾಖಂಡ, ಹಿಮಾಚಲ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ತಿಂಗಳಿನಲ್ಲಿ ವಾಡಿಕೆಗಿಂತ ಶೇ. 94 ರಷ್ಟು ಕಡಿಮೆ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಜೂನ್ ತಿಂಗಳಲ್ಲೇ ಅಂದಾಜಿಸಿತ್ತು. ಅದರಂತೆಯೇ ಈಗ ಮುಂಗಾರು ಬಿಡುವು ಪಡೆದುಕೊಂಡಿದೆ. ಮುಂಗಾರು ಹಂಗಾಮಿನಲ್ಲಿ ಇಂತಹ ಬಿಡುವು ಸಾಮಾನ್ಯವಾದರೂ, ಜುಲೈ ಮಧ್ಯಭಾಗದಲ್ಲೇ ಮಳೆ ಕೈಕೊಟ್ಟಿರುವುದು ಭತ್ತ ಸೇರಿದಂತೆ ಮುಂಗಾರು ಬೆಳೆಗಳನ್ನು ಬಿತ್ತನೆ ಮಾಡಿರುವ ರೈತರಲ್ಲಿ ಆತಂಕ ಮೂಡಿಸಿದೆ.
ಅದರಲ್ಲೂ ನೀರಾವರಿ ಸೌಲಭ್ಯವಿಲ್ಲದ ರೈತರು ಮಳೆಯನ್ನೇ ನಂಬಿಕೊಂಡಿದ್ದು, ಈ ಒಣ ಹವೆ ದೀರ್ಘಕಾಲ ಮುಂದುವರಿದರೆ ಬೆಳೆ ಒಣಗುವ ಭೀತಿ ಎದುರಾಗಿದೆ.ಆದಾಗ್ಯೂ, ಜುಲೈ ಅಂತ್ಯದ ವೇಳೆಗೆ ಮುಂಗಾರು ಮಳೆಯ ಮತ್ತೊಂದು ಸಕ್ರಿಯ ಹಂತ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
