
ಕೊಟ್ಟಿಗೆಪಾಳ್ಯದಲ್ಲಿ ಭೀಕರ ಹತ್ಯೆ: ಬೆಳ್ಳಂಬೆಳಗ್ಗೆ ತ್ರಿಬಲ್ ಮರ್ಡರ್‌ಗೆ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ನಗರದ ಕೊಟ್ಟಿಗೆಪಾಳ್ಯದಲ್ಲಿ ಬೆಳ್ಳಂಬೆಳಗ್ಗೆ ನಡೆದ ತ್ರಿಬಲ್ ಮರ್ಡರ್ (ಮೂವರ ಕೊಲೆ) ಪ್ರಕರಣ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ.
ಕೊಟ್ಟಿಗೆಪಾಳ್ಯದ ಅಯ್ಯಪ್ಪ ದೇವಸ್ಥಾನದ ಬಳಿ ಈ ಭೀಕರ ಘಟನೆ ನಡೆದಿದ್ದು, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಯುವಕನೊಬ್ಬ ತನ್ನ ತಾಯಿ, ಅಜ್ಜಿ ಹಾಗೂ ಮಾವನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಮೂವರನ್ನು ಕ್ರೂರವಾಗಿ ಹತ್ಯೆ ಮಾಡಿದ ಬಳಿಕ ಆರೋಪಿ ಯುವಕ ತಾನೂ ಸಹ ನೇಣಿಗೆ ಶರಣಾಗಿದ್ದಾನೆ.ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ. ಈತ ಹರಿತವಾದ ಆಯುಧದಿಂದ ತನ್ನ ಸ್ವಂತ ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಹಾಗೂ ಮಾವನನ್ನು ಅತ್ಯಂತ ಕ್ರೂರವಾಗಿ ಕೊಚ್ಚಿ ಕೊಂದಿದ್ದಾನೆ. ಕೃತ್ಯ ಎಸಗಿದ ಬಳಿಕ ತಾನೂ ಸಹ ಅದೇ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬೆಳ್ಳಂಬೆಳಗ್ಗೆ ಒಂದೇ ಕುಟುಂಬದ ಮೂವರ ಕೊಲೆ ಹಾಗೂ ಯುವಕನ ಆತ್ಮಹತ್ಯೆಯಿಂದಾಗಿ ಸ್ಥಳೀಯ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಸದ್ಯ ಈ ಭೀಕರ ಘಟನೆಗೆ ಸಂಬಂಧಿಸಿದಂತೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೆ ನಿಖರವಾದ ಕಾರಣ ಏನೆಂಬುದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
