
ಕಾಂಗ್ರೆಸ್ – ಬಿಜೆಪಿ ನಡುವೆ ಮುಗಿಯದ “ಸಂಘ” ರ್ಷ
ಧಾರವಾಡ, ಜು.10 : ರಾಜ್ಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ “ಸಂಘ” ರ್ಷ ಮುಗಿಯುತ್ತಲೇ ಇಲ್ಲ. ಪ್ರಿಯಾಂಕ ಖರ್ಗೆ ,ಬಿ.ಕೆ.ಹರಿ ಪ್ರಸಾದ್ ಸೇರಿದಂತೆ ಕಾಂಗ್ರೆಸ್ ನಾಯಕರು ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದಕ್ಕೆ ಕೌಂಟರ್ ಎಂಬಂತೆ ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡುತ್ತಿದ್ದಾರೆ.
ಇನ್ನು ಧಾರವಾಡದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ನವರು ಮೂಲತಃ ಆರ್ ಎಸ್ಎಸ್ ವಿರೋಧಿಗಳು. ಅವರಿಂದ ನಾವು ಒಳ್ಳೆಯದನ್ನು ಅಪೇಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಆರ್ ಎಸ್ಎಸ್ ನಿನ್ನೆ ಇತ್ತು, ಇಂದು ಇದೆ, ನಾಳೆಯೂ ಇರುತ್ತದೆ. ಇಂತಹ ವಿರೋಧಿಗಳನ್ನು ಎದುರಿಸಿಯೇ ಸಂಘಟನೆ ಗಟ್ಟಿಯಾಗಿ ಬೆಳೆದಿದೆ. ಇಂದಿರಾ ಗಾಂಧಿ ಅವರಿಗೇ ಆರ್ ಸ್ಎಸ್ ಅನ್ನು ನಿಯಂತ್ರಿಸಲು ಆಗಲಿಲ್ಲ ಎಂದರು.
ಆರ್ ಎಸ್ಎಸ್ ಸಭೆ ನಡೆದಲ್ಲೆಲ್ಲಾ ಹತ್ಯೆಗಳಾಗುತ್ತವೆ ಎಂಬ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ ಅವರು, ಹಿಂದೆ ಸಿದ್ದರಾಮಯ್ಯರ ಸರ್ಕಾರವೇ ಅಧಿಕಾರದಲ್ಲಿತ್ತಲ್ಲವೇ? ಆಗ ಕೊಲೆಗಳಾದಾಗ ಯಾರು ಮಾಡಿದ್ದು?ಎಂದು ಪತ್ತೆ ಹಚ್ಚಲು ಇವರಿಂದ ಏಕೆ ಸಾಧ್ಯವಾಗಲಿಲ್ಲ? ಕೊಲೆಗಾರರನ್ನು ಗುರುತಿಸಲಾಗದ ಇವರು ಇನ್ನು ಜಾತ್ಯತೀತ ಜನರನ್ನು ಹೇಗೆ ರಕ್ಷಣೆ ಮಾಡುತ್ತಾರೆ? ಇವರ ಸೆಕ್ಯುಲರಿಸಂ ಎಂಬುದು ಕೇವಲ ಸುಳ್ಳು. ಜಾತ್ಯತೀತತೆ ಹೆಸರನ್ನು ಬಳಸಿಕೊಂಡು ಕೇವಲ ಮತಗಳನ್ನು ಸೆಳೆಯುವ ಪ್ರಯತ್ನವನ್ನಷ್ಟೇ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
