
ಅಯೋಧ್ಯೆ ರಾಮಮಂದಿರ ದೇಣಿಗೆ ದುರುಪಯೋಗ ಆರೋಪ : ಸಿಬ್ಬಂದಿ ಮನೆಯಲ್ಲಿ ₹10 ಲಕ್ಷ ನಗದು ಪತ್ತೆ
ಲಕ್ನೋ: ಅಯೋಧ್ಯೆಯ ರಾಮಮಂದಿರ ದೇಣಿಗೆ ನಿಧಿ ದುರುಪಯೋಗ ಆರೋಪದ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ದೇವಾಲಯದ ಸಿಬ್ಬಂದಿಯೊಬ್ಬರ ಮನೆಯಲ್ಲಿ ₹10 ಲಕ್ಷದಿಂದ ₹12 ಲಕ್ಷವರೆಗೆ ನಗದು ಹಣ ಪತ್ತೆಯಾಗಿದೆ. ರಾಮಮಂದಿರದ ದೇಣಿಗೆ ನಿಧಿಯಿಂದ ಸುಮಾರು ₹7 ಕೋಟಿ ದುರುಪಯೋಗಗೊಂಡಿರುವ ಆರೋಪದ ನಡುವೆ ಈ ಬೆಳವಣಿಗೆ ನಡೆದಿದೆ.
ಅಯೋಧ್ಯೆಯ ರುಡೌಲಿ ಪ್ರದೇಶದ ಮೀನಾಪುರ್ ಠಾಕೂರನ್ ಫಗೌಲಿ ಗ್ರಾಮದಲ್ಲಿರುವ ಲವಕುಶ್ ಮಿಶ್ರಾ ನಿವಾಸದ ಮೇಲೆ ಪೊಲೀಸರು ದಾಳಿ ನಡೆಸಿ ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ. ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಸಮ್ಮುಖದಲ್ಲಿ ಈ ಕಾರ್ಯಾಚರಣೆ ನಡೆದಿದ್ದು, ಮಿಶ್ರಾ ದೇವಾಲಯದಲ್ಲಿ ಕೆಲಸಕ್ಕೆ ಸೇರುವ ಮೊದಲು ಕಾರ್ ಮೆಕ್ಯಾನಿಕ್ ಆಗಿದ್ದ ಎಂದು ತಿಳಿದುಬಂದಿದೆ. ಅಲ್ಪಾವಧಿಯಲ್ಲೇ ಅವರ ಆರ್ಥಿಕ ಸ್ಥಿತಿ ಗಣನೀಯವಾಗಿ ಸುಧಾರಿಸಿರುವುದು ಅನುಮಾನಗಳಿಗೆ ಕಾರಣವಾಗಿದೆ.
ಈ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ, ತಾವು ನಿರ್ಮಾಣ ಕಾರ್ಯದ ಮೇಲ್ವಿಚಾರಣೆಗೆ ಮಾತ್ರ ಜವಾಬ್ದಾರರಾಗಿದ್ದು, ಹಣಕಾಸು ವಿಚಾರಗಳಿಗೆ ಸಂಬಂಧಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ದೇಣಿಗೆ ನಿಧಿ ದುರುಪಯೋಗ ಆರೋಪಗಳ ಬಗ್ಗೆ ವಿಶೇಷ ತನಿಖಾ ತಂಡ (SIT) ಮೂಲಕ ಸಮಗ್ರ ತನಿಖೆ ನಡೆಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಟ್ರಸ್ಟ್ ಮನವಿ ಮಾಡಿದೆ ಎನ್ನಲಾಗಿದೆ.
ಇನ್ನೊಂದೆಡೆ, ದೇಣಿಗೆ ಹಣ ಎಣಿಸುವ ಜವಾಬ್ದಾರಿ ಹೊಂದಿದ್ದ ಇಬ್ಬರು ಉದ್ಯೋಗಿಗಳನ್ನು ಟ್ರಸ್ಟ್ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ತಿಂಗಳಿಗೆ ₹18,000 ರಿಂದ ₹20,000 ವೇತನ ಪಡೆಯುತ್ತಿದ್ದ ಈ ಉದ್ಯೋಗಿಗಳಲ್ಲಿ ಒಬ್ಬರು ಇತ್ತೀಚೆಗೆ ₹1.5 ಕೋಟಿ ಮೌಲ್ಯದ ಭೂಮಿಯನ್ನು ಖರೀದಿಸಿದ್ದರೆ, ಮತ್ತೊಬ್ಬರು ₹40 ಲಕ್ಷ ಮೌಲ್ಯದ ನಿವೇಶನ ಖರೀದಿಸಿರುವುದು ಬೆಳಕಿಗೆ ಬಂದಿದೆ. ಜೂನ್ 7ರಂದು ಸಮಾಜವಾದಿ ಪಕ್ಷದ ನಾಯಕ ಹಾಗೂ ಮಾಜಿ ಸಚಿವ ಪವನ್ ಪಾಂಡೆ, ರಾಮಮಂದಿರ ದೇಣಿಗೆ ನಿಧಿಯಲ್ಲಿ ₹5 ಕೋಟಿ ರಿಂದ ₹7.5 ಕೋಟಿ ವರೆಗೆ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದರು.
