
ಪ್ರೀತಿ ನಿರಾಕರಿಸಿದ್ದಕ್ಕೆ ಯುವತಿಯನ್ನು ಇರಿದು ಕೊಂದ ಬಾಯ್ ಫ್ರೆಂಡ್
ಬೆಂಗಳೂರು, ಜೂನ್ 14: ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಯುವತಿಯೊಬ್ಬಳನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ದುರ್ಘಟನೆ ಬೆಂಗಳೂರಿನ ಬೆಳ್ಳಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದ್ದು, ಪೊಲೀಸರು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.
ಸಿಕ್ಕಿಂ ಮೂಲದ 22 ವರ್ಷದ ಐಪಿ ಹಂಗ್ಮಾ ಕೊಲೆಯಾದ ಯುವತಿಯಾಗಿದ್ದು, ಫುರ್ಬಾ ಲೇಪ್ಸಾ ಎಂಬಾತನನ್ನು ಪ್ರಕರಣದ ಪ್ರಮುಖ ಆರೋಪಿ ಎಂದು ಗುರುತಿಸಲಾಗಿದೆ. ಇಬ್ಬರೂ ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ನೆಲೆಸಿದ್ದು, ಪರಸ್ಪರ ಪ್ರೀತಿಸುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಇತ್ತೀಚೆಗೆ ವೈಯಕ್ತಿಕ ಕಾರಣಗಳಿಂದ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಇದೇ ವಿಚಾರವಾಗಿ ಯುವತಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಆಕ್ರೋಶಗೊಂಡ ಫುರ್ಬಾ ಲೇಪ್ಸಾ, ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ಐಪಿ ಹಂಗ್ಮಾ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಬೆಳ್ಳಂದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆ ಮತ್ತು ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿದ್ದು, ಹತ್ಯೆಯ ನಿಖರ ಕಾರಣ ಹಾಗೂ ಘಟನೆಯ ಹಿನ್ನೆಲೆ ಕುರಿತು ತನಿಖೆಯನ್ನು ಮುಂದುವರಿಸಿದ್ದಾರೆ.
