Latestರಾಷ್ಟ್ರೀಯ-National

ಮೊದಲ ಬಾರಿಗೆ ಭಾರತೀಯ ಸೇನೆಗೆ ಅಧಿಕಾರಿಗಳಾಗಿ 9 ಮಹಿಳಾ ಕೆಡೆಟ್​ಗಳ ಸೇರ್ಪಡೆ

ಡೆಹ್ರಾಡೂನ್, ಜೂನ್ 14: ಭಾರತೀಯ ಸೇನೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲೊಂದು ಸ್ಥಾಪನೆಯಾಗಿದ್ದು, ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿರುವ ಪ್ರತಿಷ್ಠಿತ ಭಾರತೀಯ ಮಿಲಿಟರಿ ಅಕಾಡೆಮಿ (IMA) ತನ್ನ ಇತಿಹಾಸದಲ್ಲೇ ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳ ಬ್ಯಾಚ್‌ಗೆ ತರಬೇತಿ ನೀಡಿ ಒಂಬತ್ತು ಮಹಿಳೆಯರನ್ನು ಸೇನಾ ಅಧಿಕಾರಿಗಳನ್ನಾಗಿ ರೂಪಿಸಿದೆ.

ಶನಿವಾರ ನಡೆದ ಭವ್ಯ ಪಾಸಿಂಗ್ ಔಟ್ ಪರೇಡ್‌ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗೌರವ ವಂದನೆ ಸ್ವೀಕರಿಸಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು. 1932ರಲ್ಲಿ ಸ್ಥಾಪನೆಯಾದ ಐಎಂಎಯಲ್ಲಿ ಇದುವರೆಗೆ ಪುರುಷ ಅಧಿಕಾರಿಗಳಿಗೆ ಮಾತ್ರ ತರಬೇತಿ ನೀಡಲಾಗುತ್ತಿತ್ತು. ಇದೀಗ ಮೊದಲ ಬಾರಿಗೆ ಮಹಿಳಾ ಕೆಡೆಟ್‌ಗಳು ತರಬೇತಿ ಪೂರ್ಣಗೊಳಿಸಿ ಅಧಿಕಾರಿಗಳಾಗಿ ಹೊರಹೊಮ್ಮಿರುವುದು ದೇಶದ ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ.

ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಮುರ್ಮು, ಐಎಂಎಯಿಂದ ಮಹಿಳಾ ಕೆಡೆಟ್‌ಗಳು ಉತ್ತೀರ್ಣರಾಗುತ್ತಿರುವುದು ಕೇವಲ ರಕ್ಷಣಾ ಪಡೆಗಳ ಸಾಧನೆಯಷ್ಟೇ ಅಲ್ಲ, ಭಾರತದಲ್ಲಿ ಮಹಿಳಾ ಸಬಲೀಕರಣ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯ ಪ್ರತೀಕವಾಗಿದೆ ಎಂದು ಶ್ಲಾಘಿಸಿದರು. ಹೊಸ ಅಧಿಕಾರಿಗಳು 140 ಕೋಟಿ ಭಾರತೀಯರ ನಂಬಿಕೆ ಮತ್ತು ಭದ್ರತೆಯ ಹೊಣೆ ಹೊತ್ತಿರುವುದನ್ನು ಅವರು ನೆನಪಿಸಿದರು.

ಈ ಬ್ಯಾಚ್‌ನಲ್ಲಿರುವ ಹರಿಯಾಣದ ಸೋನಿಪತ್ ಜಿಲ್ಲೆಯ ಶೀತಲ್ ಹಾಗೂ ಶಾನನ್ ಢಾಕಾ ಅವರ ಸಾಧನೆ ವಿಶೇಷ ಗಮನ ಸೆಳೆದಿದೆ. ಶೀತಲ್ ತಮ್ಮ ಜಿಲ್ಲೆಯ ಮೊದಲ ಮಹಿಳಾ ಮಿಲಿಟರಿ ಅಧಿಕಾರಿಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಉದ್ಯಮಿ ಅಶೋಕ್ ಕುಮಾರ್ ಮತ್ತು ಗೃಹಿಣಿ ಮುಖೇಶ್ ದೇವಿ ಅವರ ಪುತ್ರಿಯಾಗಿರುವ ಶೀತಲ್, ಸೇನೆಗೆ ಸೇರುವ ತಮ್ಮ ಕನಸನ್ನು ಸಾಕಾರಗೊಳಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದ್ದಾರೆ.

ಈ ಬಾರಿಯ ಪಾಸಿಂಗ್ ಔಟ್ ಪರೇಡ್‌ನಲ್ಲಿ ಒಟ್ಟು 515 ಕೆಡೆಟ್‌ಗಳು ಸೇನೆಗೆ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ನಿಯಮಿತ ಕೋರ್ಸ್, ತಾಂತ್ರಿಕ ಪ್ರವೇಶ ಯೋಜನೆ (TES) ಹಾಗೂ ತಾಂತ್ರಿಕ ಪದವಿ ಕೋರ್ಸ್‌ಗಳ ಭಾರತೀಯ ಕೆಡೆಟ್‌ಗಳ ಜೊತೆಗೆ ವಿವಿಧ ಸ್ನೇಹ ರಾಷ್ಟ್ರಗಳ 34 ವಿದೇಶಿ ಕೆಡೆಟ್‌ಗಳು ಸಹ ಪದವಿ ಪಡೆದಿದ್ದಾರೆ.

ಐಎಂಎ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಉತ್ತರಾಖಂಡ ರಾಜ್ಯಪಾಲ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಗುರ್ಮೀತ್ ಸಿಂಗ್, ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಾಗೂ ಹಲವು ಹಿರಿಯ ಸೇನಾ ಅಧಿಕಾರಿಗಳು ಉಪಸ್ಥಿತರಿದ್ದು, ಹೊಸ ಅಧಿಕಾರಿಗಳಿಗೆ ಶುಭಾಶಯ ಕೋರಿದರು.

ಶತಮಾನದ ಇತಿಹಾಸ ಹೊಂದಿರುವ ಐಎಂಎಯ ಈ ಐತಿಹಾಸಿಕ ಹೆಜ್ಜೆ ದೇಶದ ಲಕ್ಷಾಂತರ ಯುವತಿಯರಿಗೆ ಸೇನೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಲು ಪ್ರೇರಣೆಯಾಗಿದ್ದು, ರಾಷ್ಟ್ರ ರಕ್ಷಣೆಯಲ್ಲಿ ಮಹಿಳೆಯರ ಪಾತ್ರವನ್ನು ಮತ್ತಷ್ಟು ಬಲಪಡಿಸುವ ದಿಕ್ಕಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ.

Share with Friends
author avatar
News Desk