
ಕೇರಳಂ ನಲ್ಲಿ ಭೂ ಕುಸಿತಕ್ಕೆ ಮೂವರು ಕಾರ್ಮಿಕರು ಬಲಿ
ವಯನಾಡ್ (ಕೇರಳಂ),ಜು.7 : ದೇವರ ನಾಡು ಕೇರಳಂನಲ್ಲಿ ಮತ್ತೆ ಭೂ ಕುಸಿತ ಸಂಭವಿಸಿದೆ.
ಸದ್ಯ ಕೇರಳಂನ ವಯನಾಡ್ ಜಿಲ್ಲೆಯ ಮೆಪ್ಪಾಡಿ ಬಳಿಯ ಕಲ್ಲಾಡಿಯಲ್ಲಿ ಸುರಂಗ ರಸ್ತೆ ಯೋಜನಾ ಸ್ಥಳದಲ್ಲಿ ಭೂಕುಸಿತ ಸಂಭವಿಸಿದ್ದು, ಮೂವರು ಕಾರ್ಮಿಕರು ಜೀವಂತ ಸಮಾಧಿಯಾಗಿದ್ದಾರೆ.ಉಳಿದಂತೆ ರಕ್ಷಣಾ ಕಾರ್ಯದಲ್ಲಿ 7 ಮಂದಿಯನ್ನು ರಕ್ಷಿಸಲಾಗಿದ್ದು,8 ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ತಿಳಿದು ಬಂದಿದೆ.

ಇನ್ನು ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಸಿಬ್ಬಂದಿ, ಪೊಲೀಸರು , ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ನಡೆಸುತ್ತಿವೆ.
ಇದೇ ವೇಳೆ ಘಟನೆಯಲ್ಲಿ ಗಾಯಗೊಂಡಿರುವ ಕಿರಣ್ ಕುಮಾರ್, ದಿಲೀಪ್, ಸೂರಜ್ ಯಾದವ್, ಸಂಜಯ್ ಠಾಕೂರ್, ರಜನೀಶ್ ಮತ್ತು ತನ್ಮಯ್ ಘೋಷ್ ಅವರನ್ನು ವಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಲಪ್ಪುರಂ ಮತ್ತು ವಯನಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಅನಕ್ಕೊಂಪೊಯಿಲ್-ಮೆಪ್ಪಾಡಿ ಸುರಂಗ ಯೋಜನೆಯ ಕೆಲಸ ನಡೆಯುತ್ತಿರುವ ಮೀನಾಕ್ಷಿ ಸೇತುವೆಯ ಬಳಿ ಈ ಘಟನೆ ಸಂಭವಿಸಿದೆ.

ಈ ನಡುವೆ ಕಲ್ಲಾಡಿ ಸುರಂಗ ಮಾರ್ಗದ ಯೋಜನಾ ಸ್ಥಳದಲ್ಲಿ ಸಂಭವಿಸಿದ ಘಟನೆಯು ನೈಸರ್ಗಿಕ ಭೂಕುಸಿತವಲ್ಲ, ಬದಲಾಗಿ ಅಗೆದ ಮಣ್ಣನ್ನು ಅವೈಜ್ಞಾನಿಕವಾಗಿ ರಾಶಿ ಹಾಕಿದ್ದರಿಂದ ಭೂಕುಸಿತ ಉಂಟಾಗಿದೆ ಎಂದು ಕೇರಳದ ಸಚಿವ ಟಿ. ಸಿದ್ದಿಕ್ ತಿಳಿಸಿದ್ದಾರೆ.
