BlogLatestರಾಜ್ಯ-Karnataka

ಬಿಎಚ್‌ಇಎಲ್‌ ಕಾರ್ಖಾನೆಗೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಭೇಟಿ

ಬೆಂಗಳೂರು : ಪ್ರಧಾನಿಗಳ ಆತನಿರ್ಭರ್‌ ಭಾರತ ಹಾಗೂ ಮೆಕ್‌ ಇನ್‌ ಇಂಡಿಯಾ ಪರಿಕಲ್ಪನೆಗಳು ಕೈಗಾರಿಕಾ ಕ್ಷೇತ್ರದ ಮೇಲೆ ಸಂಜೀವಿನಿಯಂತೆ ಸಕಾರಾತಕ ಪರಿಣಾಮ ಬೀರುತ್ತಿವೆ ಎಂದು ಕೇಂದ್ರದ ಭಾರಿ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿಪಾದಿಸಿದರು.

ನಗರದ ಮೈಸೂರು ರಸ್ತೆಯಲ್ಲಿರುವ ಭಾರತ್‌ ಹೆವಿ ಎಲೆಕ್ಟ್ರಿಕಲ್‌ ಲಿಮಿಟೆಡ್‌ (ಬಿಎಚ್‌ಇಎಲ್‌)ನ ವಿದ್ಯುನಾನ ಘಟಕಕ್ಕೆ ಭೇಟಿ ನೀಡಿ ಅಧಿಕಾರಿ ಮತ್ತು ಕಾರ್ಮಿಕರ ಜತೆ ಸಂವಾದದ ವೇಳೆ ಸಚಿವರು ಮಾತನಾಡಿದರು.

ಪ್ರಧಾನಿಯವರು ಸ್ಪಷ್ಟ ಮತ್ತು ನಿಖರ ಗುರಿಗಳನ್ನು ಇಟ್ಟುಕೊಂಡಿದ್ದಾರೆ. ಭಾರತವನ್ನು ಮೂರನೇ ಬೃಹತ್‌ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದು ಹಾಗೂ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬಲು ಕೈಗಾರಿಕಾ ಉತ್ಪನ್ನವನ್ನು ಹೆಚ್ಚಳ ಮಾಡುವುದು ಅವರ ಉದ್ದೇಶವಾಗಿದೆ. ಅದಕ್ಕಾಗಿ ಅವರ ಕನಸಿನ ಮೆಕ್‌ ಇನ್‌ ಇಂಡಿಯಾ ಹಾಗೂ ಆತನಿರ್ಭರ್‌ ಭಾರತ್‌ ಪರಿಕಲ್ಪನೆಗಳು ಹೆಚ್ಚು ಪರಿಣಾಮಕಾರಿ ಆಗಿವೆ. ಇದೇ ಪರಿಕಲ್ಪನೆ ಅಡಿಯಲ್ಲಿ ಬಿಎಚ್‌ಇಎಲ್‌ ಕಾರ್ಖಾನೆಯನ್ನು ಮತ್ತಷ್ಟು ಸಶಕ್ತಗೊಳಿಸಲಾಗುವುದು ಎಂದು ಅವರು ಹೇಳಿದರು.

ಈ ವೇಳೆ ಸಚಿವರು ಘಟಕದ ಎಲ್ಲಾ ವಿಭಾಗಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲಿಸಿದರು. ಕಾರ್ಖಾನೆಯ ಕಾರ್ಯ ಚಟುವಟಿಕೆಗಳ ಬಗ್ಗೆ ಉನ್ನತ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.

ದೇಶದ ಒಟ್ಟಾರೆ ಅಭಿವೃದ್ಧಿಗೆ ಪ್ರಧಾನಿಗಳು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅವನ್ನು ನಾವು ನಿಕಟವಾಗಿ ಹಿಂಬಾಲಿಸುತ್ತಿದ್ದೇವೆ. ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಪೈಕಿ ಉತ್ತಮವಾಗಿ ನಡೆಯುತ್ತಿದೆ. ಮೈಸೂರು ಅರಸರು, ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಹಿನ್ನೆಲೆಯಲ್ಲಿ ಇದು ಸ್ಥಾಪನೆ ಆಯಿತು. ಇದು ಕೈಗಾರಿಕೆ ಕ್ಷೇತ್ರದಲ್ಲಿ ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಸಾರ್ವಜನಿಕ ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಇಂಥ ಸವಾಲಿನ ನಡುವೆಯೂ  ಲಾಭದಾಯಕವಾಗಿ ಮುನ್ನಡೆಯುತ್ತಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.

ವಿದ್ಯುತ್‌ ಕ್ಷೇತ್ರದಲ್ಲಿ ಕೊಡುಗೆ ಅಸಾಧಾರಣವಾಗಿದ್ದು, ಥರ್ಮಲ್‌ ವಿದ್ಯುತ್‌ ಕ್ಷೇತ್ರದಲ್ಲಿ ಶೇ.40ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಕಂಪನಿ ಹೊಂದಿದೆ. ಸೇನೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಕಂಪನಿ ಕೊಡುಗೆ ಅನನ್ಯವಾಗಿದೆ ಎಂದರು.

 ಕಂಪನಿಗೆ ದೊಡ್ಡ ಪ್ರಮಾಣದ ಬೇಡಿಕೆಳು ಬರುತ್ತಿವೆ, ಆದರೆ ಲಾಭ ಅಷ್ಟು ತೃಪ್ತಿದಾಯಕವಾಗಿ ಇಲ್ಲ ಎಂದ ಅವರು, ನೀವು ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಯಾವುದೇ ಕಾರಣಕ್ಕೂ ನಷ್ಟಕ್ಕೆ ಸಿಲುಕದ ಹಾಗೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳು, ಕಾರ್ಮಿಕರ ಮೇಲೆಯೇ ಇದೆ ಎಂದು ಒತ್ತಿ ಹೇಳಿದರು.

ಪ್ರಧಾನಿಗಳ ಮೆಕ್‌ ಇಂಡಿಯಾ, ಆತನಿರ್ಭರ್‌ ಭಾರತ್‌ ಪರಿಕಲ್ಪನೆಯ ಅಡಿಯಲ್ಲಿ ಕಂಪನಿ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ವೇಗವಾಗಿ ಬೆಳೆಯುತ್ತಿರುವ ತಾಂತ್ರಿಕ ಆವಿಷ್ಕಾರಗಳ ನಡುವೆ ಕಂಪನಿ ವೇಗವಾಗಿ ಮುಂದುವರಿಯುತ್ತಿದೆ. ಹೊಸ ಆವಿಷ್ಕಾರ, ತಂತ್ರಜ್ಞಾನ ಅಳವಡಿಕೆಯಲ್ಲಿ ಮೈಮರೆಯುವುದು ಬೇಡ ಎಂದು ಅವರು ಎಚ್ಚರಿಕೆ ನೀಡಿದರು.

ಕಾರ್ಖಾನೆಯ ಕಾರ್ಯ ನಿರ್ವಾಹಕ ನಿರ್ದೇಶಕ ಶ್ಯಾಂ ಬಾಬು ಸೇರಿದಂತೆ ಕಂಪನಿಯ ಹಿರಿಯ ಅಧಿಕಾರಿಗಳು ಹಾಜರಿದ್ದರು.

Share with Friends
author avatar
News Desk