
ಶಾಲೆಗೆ ಮೊಬೈಲ್ ತರಬೇಡ ಎಂದ ಶಿಕ್ಷಕಿಯ ಕಾರಿನ ಮೇಲೆ ಕಲ್ಲು ಎತ್ತಿ ಹಾಕಲು ಮುಂದಾದ ವಿಧ್ಯಾರ್ಥಿ
ರಾಯಚೂರು: ಶಾಲೆಗೆ ಮೊಬೈಲ್ ತರದಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಶಿಕ್ಷಕಿ ಹಾಗೂ ವಿದ್ಯಾರ್ಥಿಯ ನಡುವೆ ವಾಗ್ವಾದ ನಡೆದಿದ್ದು, ಬಳಿಕ ವಿದ್ಯಾರ್ಥಿಯೊಬ್ಬ ಶಿಕ್ಷಕಿಯ ಕಾರಿನ ಮೇಲೆ ಕಲ್ಲು ಎತ್ತಿ ಎಸೆಯಲು ಮುಂದಾದ ಘಟನೆ ರಾಯಚೂರು ತಾಲೂಕಿನ ಪಂಚಮುಖಿ ಶಾಲೆಯಲ್ಲಿ ನಡೆದಿದೆ ಎನ್ನಲಾಗಿದೆ.
ಎರಡು ದಿನಗಳ ಹಿಂದೆ ನಡೆದಿರುವ ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾರ್ಥಿಯ ಫೋಟೋ ವ್ಯಾಪಕವಾಗಿ ಹರಿದಾಡುತ್ತಿದೆ.
ಮಾಹಿತಿಯ ಪ್ರಕಾರ, ಶಾಲೆಗೆ ಮೊಬೈಲ್ ತರಬಾರದು ಎಂದು ಶಿಕ್ಷಕಿ ಸೂಚಿಸಿದ್ದರಿಂದ ವಿದ್ಯಾರ್ಥಿ ಅಸಮಾಧಾನಗೊಂಡಿದ್ದಾನೆ. ಈ ವೇಳೆ ಶಿಕ್ಷಕಿ ಮತ್ತು ವಿದ್ಯಾರ್ಥಿಯ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಆಕ್ರೋಶಗೊಂಡ ವಿದ್ಯಾರ್ಥಿ ಶಿಕ್ಷಕಿಯ ಕಾರಿನ ಮೇಲೆ ಕಲ್ಲು ಎತ್ತಿ ಎಸೆಯಲು ಮುಂದಾಗಿದ್ದಾನೆ ಎನ್ನಲಾಗಿದೆ.
ಘಟನೆಯ ಬಳಿಕ ಸ್ಥಳಕ್ಕೆ ಪೊಲೀಸ್ ಪೇದೆ ಹಾಗೂ ಗ್ರಾಮದ ವ್ಯಕ್ತಿಯೊಬ್ಬರು ಆಗಮಿಸಿ ರಾಜಿ ಸಂಧಾನ ಮಾಡಿಸಿರುವುದಾಗಿ ತಿಳಿದುಬಂದಿದೆ.
ಆದರೆ ಶಿಕ್ಷಕಿಯೊಂದಿಗೆ ಅನುಚಿತವಾಗಿ ವರ್ತಿಸಿದ ವಿದ್ಯಾರ್ಥಿಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕಾಗಿತ್ತು. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಮುಕ್ತಾಯಗೊಳಿಸಿರುವುದು ಸರಿಯೇ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಹಾಗೂ ಸಾಮಾಜಿಕ ಜಾಲತಾಣ ಬಳಕೆದಾರರು ಎತ್ತುತ್ತಿದ್ದಾರೆ.
