
ಉಚಿತ ವಿದ್ಯುತ್ ಪಡೆಯುತ್ತದ್ದವರಿಗೆ ಗ್ಯಾರಂಟಿ ಶಾಕ್ : ಗೃಹಜ್ಯೋತಿ ಯೋಜನೆ ಪರಿಷ್ಕರಣೆ..?
ಬೆಂಗಳೂರು, ಜೂನ್ 15: ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ದುರ್ಬಳಕೆಗೆ ಕಡಿವಾಣ ಹಾಕಲು ಕ್ರಮ ಕೈಗೊಂಡಿದ್ದು, ಗೃಹಲಕ್ಷ್ಮಿ ಯೋಜನೆಯ ನಂತರ ಇದೀಗ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಗೆ ಮುಂದಾಗಿದೆ. ಮನೆಗಳಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡುವ ಈ ಯೋಜನೆಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಸರ್ಕಾರ ಸಿದ್ಧತೆ ನಡೆಸಿದೆ.
ಮೂಲಗಳ ಪ್ರಕಾರ, ಮುಂದಿನ ಎರಡು ದಿನಗಳಲ್ಲಿ ಈ ಕುರಿತು ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಪರಿಷ್ಕರಣೆಯ ಭಾಗವಾಗಿ ಫಲಾನುಭವಿಗಳ ಮಾಹಿತಿಯನ್ನು ಮರುಪರಿಶೀಲನೆ ಮಾಡುವ ಪ್ರಕ್ರಿಯೆ ಆರಂಭವಾಗಲಿದ್ದು, ಆಧಾರ್, ಇ-ಕೆವೈಸಿ ಹಾಗೂ ಮೊಬೈಲ್ ನಂಬರ್ ದೃಢೀಕರಣ ಕಡ್ಡಾಯಗೊಳ್ಳುವ ಸಾಧ್ಯತೆ ಇದೆ. ಇದಕ್ಕಾಗಿ ಸೇವಾಸಿಂಧು ಪೋರ್ಟಲ್‌ನಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಪ್ರಸ್ತುತ ಗೃಹಜ್ಯೋತಿ ಯೋಜನೆಯಡಿ ರಾಜ್ಯದ ಸುಮಾರು 1.70 ಕೋಟಿ ಕುಟುಂಬಗಳು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿವೆ. ಈ ಯೋಜನೆಗಾಗಿ ಸರ್ಕಾರ ಪ್ರತಿ ತಿಂಗಳು ಸುಮಾರು 440 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ. ಆದರೆ ಕೆಲವರು ಗೃಹಬಳಕೆಯ ಹೆಸರಿನಲ್ಲಿ ವಾಣಿಜ್ಯ ಚಟುವಟಿಕೆಗಳಿಗೆ ಉಚಿತ ವಿದ್ಯುತ್ ಬಳಸುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ ಎನ್ನಲಾಗಿದೆ.
ಹೀಗಾಗಿ ಮನೆಗಳ ಜೊತೆಗೆ ಅಂಗಡಿಗಳು, ವಾಣಿಜ್ಯ ಕಟ್ಟಡಗಳು ಹಾಗೂ ಅನರ್ಹರು ಉಚಿತ ವಿದ್ಯುತ್ ಸೌಲಭ್ಯ ಪಡೆಯುತ್ತಿರುವ ಪ್ರಕರಣಗಳನ್ನು ಪತ್ತೆಹಚ್ಚಲು ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಜೊತೆಗೆ ರಾಜ್ಯದ ಹೊರಗಿನ ವ್ಯಕ್ತಿಗಳು ಕೂಡ ಯೋಜನೆಯ ಲಾಭ ಪಡೆಯುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿರುವ ಹಿನ್ನೆಲೆ ಪರಿಶೀಲನೆ ಮತ್ತಷ್ಟು ಕಟ್ಟುನಿಟ್ಟಾಗುವ ಸಾಧ್ಯತೆ ಇದೆ.
ಈ ಕುರಿತು ಪ್ರತಿಕ್ರಿಯಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಗ್ಯಾರಂಟಿ ಯೋಜನೆಗಳ ಲಾಭ ಅರ್ಹರಿಗೆ ಮಾತ್ರ ಸಿಗಬೇಕು. ಕೆಲವರು ತಪ್ಪು ಮಾಹಿತಿ ನೀಡಿ ಬೇರೆ ಖಾತೆಗಳಿಗೆ ಹಣ ಹೋಗುವಂತಾಗಿದೆ. ಫಲಾನುಭವಿಗಳ ಖಾತೆಗೇ ನೇರವಾಗಿ ಹಣ ಜಮೆಯಾಗಬೇಕು. ಕರ್ನಾಟಕದ ಜನರಿಗೆ ಮಾತ್ರ ಗ್ಯಾರಂಟಿ ಸೌಲಭ್ಯಗಳನ್ನು ನೀಡಲಾಗುತ್ತದೆ” ಎಂದು ಹೇಳಿದ್ದಾರೆ.
ಇನ್ನೊಂದೆಡೆ, ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಬಿಜೆಪಿ ಟೀಕೆಗಳಿಗೆ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ಬಿಜೆಪಿ ತಮ್ಮ ಕಾರ್ಯಕರ್ತರಿಗೆ ಗ್ಯಾರಂಟಿ ಬೇಡ ಎಂದು ಅಭಿಯಾನ ನಡೆಸಲಿ. ಆದರೆ ಸರ್ಕಾರ ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವುದಿಲ್ಲ. ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸುವ ಉದ್ದೇಶದಿಂದ ಮಾತ್ರ ಪರಿಷ್ಕರಣೆ ಮಾಡಲಾಗುತ್ತಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳ ಪರಿಶೀಲನೆ ಮತ್ತು ಇ-ಕೆವೈಸಿ ಪ್ರಕ್ರಿಯೆ ಕುರಿತು ಸರ್ಕಾರದ ಅಧಿಕೃತ ಆದೇಶಕ್ಕಾಗಿ ಫಲಾನುಭವಿಗಳು ಕಾದು ನೋಡುತ್ತಿದ್ದಾರೆ.
