ಹೃದಯ ಗೆದ್ದ ಉದ್ಯಮಿ ರತನ್ ಟಾಟಾ ಅಗಲಿಕೆಗೆ ಕಂಬನಿ ಮಿಡಿದ ಭಾರತ, ಮುಂಬೈನಲ್ಲಿ ಅಂತ್ಯಕ್ರಿಯೆ
ಮುಂಬೈ : ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ. ರತನ್ ಟಾಟಾ ಇನ್ನು ಮುಂದೆ ಕೇವಲ ನೆನಪು ಮಾತ್ರ. ಅವರ ಅಗಲಿಕೆಗೆ ಇಡೀ ದೇಶವೇ ಕಂಬನಿ ಮಿಡಿಯುತ್ತಿದೆ.
ಕಳೆದ ರಾತ್ರಿ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ನಿಧನರಾದ ರತನ್ ಟಾಟಾ ಅವರ ಕಳೇಬರವನ್ನು ನಗರದಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಮೃತರ ಗೌರವಾರ್ಥವಾಗಿ ಅವರ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಲಾಗಿತ್ತು. ಭಾರತದ ಕ್ರಿಕೆಟ್ ಮಾಜಿ ಆಟಗಾರ ಸಚಿನ್ ತೆಂಡಲ್ಕೂರ್, ಉದ್ಯಮಿಗಳಾದ ಮುಖೇಶ್ ಅಂಬಾನಿ, ಅದಾನಿ ಸೇರಿದಂತೆ ಅನೇಕ ಗಣ್ಯರು ಅಂತಿಮ ದರ್ಶನ ಪಡೆದರು. ಬ್ರೀಚ್ ಕ್ಯಾಂಡಿ ಅಸ್ಪತ್ರೆಯಿಂದ ತೆರೆದ ವಾಹನದಲ್ಲಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ರತನ್ ಟಾಟಾ ಅವರ ಪಾರ್ಥೀವ ಶರೀರವನ್ನು ಅವರ ನಿವಾಸಕ್ಕೆ ತರಲಾಯಿತು.

ದಕ್ಷಿಣ ಮುಂಬೈನ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್ (ಎನ್ಸಿಪಿಎ) ಲಾನ್ಸ್ ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಬೆಳಗ್ಗೆಯಿಂದಲೇ ಅವರ ನಿವಾಸದ ಬಳಿ ಅಪಾರ ಸಂಖ್ಯೆಯಲ್ಲಿ ಆಗಮಿಸಿದ ಅಭಿಮಾನಿಗಳು ಮೇರು ಚೇತನದ ಅಂತಿಮ ದರ್ಶನ ಪಡೆದು, ಅಂತಿಮ ನಮನ ಸಲ್ಲಿಸಿದರು.
ಭಾರತದ ಕೈಗಾರಿಕೋದ್ಯಮಕ್ಕೆ ಹೊಸ ಮುನ್ನುಡಿ ಬರೆದು ದೇಶದೆಲ್ಲೆಡೆ ಮನೆಮಾತಾಗಿದ್ದ ಪದಭೂಷಣ ಪ್ರಶಸ್ತಿ ಪುರಸ್ಕೃತ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ಅಂತ್ಯಸಂಸ್ಕಾರವು ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಡಾ.ಇ.ಮೋಸೆಸ್ ರಸ್ತೆಯಲ್ಲಿರುವ ವರ್ಲಿಯಲ್ಲಿರುವ ರುದ್ರಭೂಮಿಯಲ್ಲಿ ಹಿಂದೂ ಸಂಪ್ರದಾಯದಂತೆ ನೆರವೇರಿತು.ತಮ್ಮ ಜೀವನವನ್ನೇ ದೇಶ ಸೇವೆಗೆ ಸಮರ್ಪಣೆ ಮಾಡಿಕೊಂಡಿದ್ದ ಭಾರತದ ದೈತ್ಯ ಉದ್ಯಮಿಯು ಪಂಚಭೂತಗಳಲ್ಲಿ ಲೀನವಾದರು.
ಶೋಕಾಚರಣೆ
ರತನ್ ಟಾಟಾ ಅವರ ಗೌರವಾರ್ಥ ಇಂದು ಒಂದು ದಿನದ ಶೋಕಾಚರಣೆಯನ್ನು ಘೋಷಿಸಲಾಗಿತ್ತು.ರಾಜ್ಯದ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧದಲ್ಲಿ ಹಾರಿಸಲಾಗಿದ್ದು, ಎಲ್ಲಾ ಮನರಂಜನಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು.
ಸಜ್ಜನ, ಸರಳ, ವ್ಯಕ್ತಿತ್ವ :
ಆರು ಖಂಡಗಳ 100ಕ್ಕೂ ಹೆಚ್ಚು ದೇಶಗಳಲ್ಲಿ 30ಕ್ಕೂ ಅಧಿಕ ಕಂಪನಿಗಳನ್ನು ನಿಯಂತ್ರಿಸುತ್ತಿದ್ದರೂ, ರತನ್ ಟಾಟಾ ಅವರ ಬಹಳ ಸರಳ ಜೀವನ ಎಲ್ಲರಲ್ಲಿಯೂ ಸೋಜಿಗ ಉಂಟು ಮಾಡುತ್ತಿತ್ತು. ತಮ ಅಗಾಧ ಪ್ರಭಾವ ಹಾಗೂ ಯಶಸ್ಸಿನ ನಡುವೆಯೂ ಅವರು ಕೊಟ್ಯಾಧಿಪತಿಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಅವರು ಜನಮಾನಸದಲ್ಲಿ ಸದಾ ಉಳಿಯುವ ವಿಶಿಷ್ಟ ವ್ಯಕ್ತಿಯಾಗಿ ಉಳಿದುಹೋದರು.
ಜಮ್ಶೆಡ್ ಜಿ ಟಾಟಾ ಅವರ ಮರಿ ಮೊಮಗನಾಗಿ, ದೇಶದ ಅತ್ಯಂತ ಪ್ರತಿಷ್ಠಿತ ಉದ್ಯಮ ಕುಟುಂಬದಲ್ಲಿ 1937ರ ಡಿ 28ರಂದು ಜನಿಸಿದ ರತನ್ ಟಾಟಾ ಅವರು ಯಾವುದೇ ಹಮುಬಿಮುಗಳನ್ನು ಪ್ರದರ್ಶಿಸಿದವರಲ್ಲ. ಬಾಲ್ಯದಲ್ಲಿಯೇ ಅವರ ತಂದೆ ಮತ್ತು ತಾಯಿ ಪರಸ್ಪರ ದೂರವಾಗಿದ್ದರು.
ಹೀಗಾಗಿ ಅವರು ಪೋಷಕರಿಗಿಂತ ಹೆಚ್ಚು ಸಮಯವನ್ನು ಅಜ್ಜಿ ನವಾಜ್ ಭಾಯಿ ಟಾಟಾ ಅವರ ಪಾಲನೆಯಲ್ಲಿ ಬೆಳೆದಿದ್ದರು. ಸಿರಿವಂತ ಕುಟುಂಬದಲ್ಲಿ ಜನಿಸುವ ಸೌಭಾಗ್ಯ ಅವರದಾಗಿದ್ದರೂ, ಕೌಟುಂಬಿಕ ಜೀವನದ ಪ್ರೀತಿ, ಆನಂದವನ್ನು ಕಾಣಲು ಸಾಧ್ಯವಾಗಲಿಲ್ಲ. ಕೊನೆಯವರೆಗೂ ಅವಿವಾಹಿತರಾಗಿಯೇ ಉಳಿದ ಅವರು, ಆ ಕೌಟುಂಬಿಕ ಬದುಕನ್ನು ತಾವೂ ಕಟ್ಟಿಕೊಳ್ಳಲಿಲ್ಲ. ಈ ಕಾರಣದಿಂದ ಸವಲತ್ತು ಮತ್ತು ಕಷ್ಟ ಎರಡೂ ಅವರ ಅರಿವಿಗೆ ಬಂದಿತ್ತು.
ರತನ್ ಟಾಟಾ ಇನ್ನು ಮುಂದೆ ನಮೊಂದಿಗೆ ಇಲ್ಲದಿದ್ದರೂ, ಅವರ ನಮ್ರತೆ, ಉದಾರತೆ ಮತ್ತು ಉದ್ದೇಶದ ಪರಂಪರೆಯು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವುದನ್ನು ಮುಂದುವರಿಸುತ್ತದೆ ಎಂದು ಟಾಟಾ ಕುಟುಂಬವು ತಿಳಿಸಿದೆ. ಟಾಟಾ ಟ್ರಸ್ಟ್ಗಳು ಲಾಭೋದ್ದೇಶವಿಲ್ಲದ ಸಮೂಹವಾಗಿದೆ.
ದೇಶದ ಎರಡನೇ ಅತ್ಯುನ್ನತ ನಾಗರಿಕ ಗೌರವ ಪದವಿಭೂಷಣವನ್ನು ಪಡೆದ ರತನ್ ಟಾಟಾ ಅವರು ಟಾಟಾ ಟ್ರಸ್ಟ್ನ ಅಧ್ಯಕ್ಷರಾಗಿದ್ದರು. ರತನ್ ಟಾಟಾ ಅವರ ಭೌತಿಕ ಉಪಸ್ಥಿತಿಯನ್ನು ನಾವು ಕಳೆದುಕೊಂಡಿದ್ದೇವೆ. ಆದರೆ, ಅವರು ನಮ ಹೃದಯ ಮತ್ತು ಮನಸ್ಸಿನಲ್ಲಿ ಎಂದಿಗೂ ಶಾಶ್ವತ ಎಂದು ಭಾವನಾತಕವಾಗಿ ಟಾಟಾ ಸಮೂಹದ ಅಧ್ಯಕ್ಷ ಎನ್.ಚಂದ್ರಶೇಖರನ್ ಅವರು ಹೇಳಿದ್ದಾರೆ.
33.7 ಲಕ್ಷ ಕೋಟಿ ಒಡೆಯ
ಲಕ್ಷ ಕೋಟಿ ಮೌಲ್ಯದ ವ್ಯಾಪರ ವಹಿವಾಟು ನಡೆಸುತ್ತಿರುವ ರತನ್ ಟಾಟಾ ಅವರ ಬಳಿ ಖುದ್ದು ಎಷ್ಟು ಆಸ್ತಿ ಇತ್ತು ಗೊತ್ತಾ? ರತನ್ ಟಾಟಾ ಅವರು ಹಲವಾರು ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಹೊಂದಿರಬೇಕು. ಆದರೆ ವಾಸ್ತವ ವಿಚಾರ ತಿಳಿದರೆ ನೀವು ನಂಬಲೂ ಸಾಧ್ಯವಾಗದ ಆಘಾತಕಾರಿ ಸಂಗತಿ ತಿಳಿದು ಬರುತ್ತದೆ.
ಇಂದು ಅದರ ಅಡಿಯಲ್ಲಿ 29 ಲಿಸ್ಟೆಡ್ ಕಂಪನಿಗಳಿವೆ ಎಂಬ ಅಂಶದಿಂದ ನೀವು ಟಾಟಾ ಗ್ರೂಪ್ನ ವೈಶಾಲ್ಯತೆಯನ್ನು ಅಂದಾಜು ಮಾಡಬಹುದು. ಹೌದು, ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳು ಮತ್ತು ಅವುಗಳ ಎಲ್ಲಾ ಡೇಟಾವು ಸಾರ್ವಜನಿಕರಿಗೆ ಲಭ್ಯವಿದೆ. ಈ ಎಲ್ಲಾ 29 ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯವನ್ನು ನಾವು ನೋಡಿದರೆ, ಇದು ಆಗಸ್ಟ್ 20, 2024 ರ ವೇಳೆಗೆ ಸುಮಾರು 403 ಬಿಲಿಯನ್ ಡಾಲರ್(ಸುಮಾರು 33.7 ಲಕ್ಷ ಕೋಟಿ ರೂ.) ಎಂದು ಹೇಳಲಾಗುತ್ತದೆ.
ಐಐಎಫ್ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ಅವರ ಒಟ್ಟು ನಿವ್ವಳ ಮೌಲ್ಯ ಕೇವಲ 3,800 ಕೋಟಿ ಎಂದು ಹೇಳಲಾಗಿದೆ. ಒಂದು ವರ್ಷದ ಹಿಂದೆ ಅಂದರೆ 2021ರಲ್ಲಿ ಅವರ ಒಟ್ಟು ಸಂಪತ್ತು ಕೇವಲ 3,500 ಕೋಟಿ ಎಂದು ಹೇಳಲಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ, ಅವರ ಒಟ್ಟು ಆಸ್ತಿ ಕಂಪನಿಯ ಒಟ್ಟು ಆಸ್ತಿಯ 0.50 ಪ್ರತಿಶತವೂ ಇಲ್ಲ.
ಈ ಕಂಪನಿಯು ತನ್ನ ಎಲ್ಲಾ ಸಂಸ್ಥೆಗಳ ಒಟ್ಟು ಆದಾಯದ 66 ಪ್ರತಿಶತವನ್ನು ದತ್ತಿ ಕಾರ್ಯಗಳಲ್ಲಿ ಖರ್ಚು ಮಾಡುತ್ತದೆ. ನಿಸ್ಸಂಶಯವಾಗಿ, ರತನ್ ಟಾಟಾ ಅವರು ತಮ ಕಂಪನಿಗಳ ಗಳಿಕೆಯನ್ನು ಸ್ವತಃ ತೆಗೆದುಕೊಳ್ಳುವ ಬದಲು ದೇಶ ಮತ್ತು ಅವರ ದೇಶವಾಸಿಗಳಿಗೆ ಟ್ರಸ್ಟ್ ಮೂಲಕ ಖರ್ಚು ಮಾಡುತ್ತಾರೆ.
`ಭಾರತರತ್ನ’ಕ್ಕಿಂತ ಭಾರತೀಯನಾಗಿರುವುದೇ ಹೆಮ್ಮೆ :
ಟಾಟಾ ಗ್ರೂಪ್ ಮುಖ್ಯಸ್ಥರಾಗಿದ್ದ ರತನ್ ಟಾಟಾ ಅವರಿಗೆ ಭಾರತ ರತ್ನ ಸಿಗಬೇಕೆಂದು ಅಭಿಯಾನ ನಡೆಸುತ್ತಿದ್ದಾಗ ನಾನು ಭಾರತೀಯನಾಗಿರುವುದೇ ಅದೃಷ್ಟ ಎಂದು ಹೇಳಿ ಎಲ್ಲರ ಮೆಚ್ಚುಗೆ ಗಳಿಸಿದ್ದರು. ಭಾರತ ರತ್ನ ಗೌರವವನ್ನು ರತನ್ ಟಾಟಾ ಅವರಿಗೆ ನೀಡಬೇಕು. ಲಕ್ಷಾಂತರ ಜನರಿಗೆ ಟಾಟಾ ಕಂಪನಿ ಉದ್ಯೋಗ ನೀಡಿದೆ. ಸಾಮಾಜಿಕ ಕಾರ್ಯಕ್ಕೆ ಕೋಟ್ಯಂತರ ರೂ. ಹಣವನ್ನು ಟಾಟಾ ಗ್ರೂಪ್ ನೀಡಿದೆ. ಹೀಗಾಗಿ ಭಾರತ ರತ್ನ ಗೌರವಕ್ಕೆ ರತನ್ ಟಾಟಾ ಅರ್ಹ ವ್ಯಕ್ತಿ ಎಂದು ಹೇಳಿ ಹ್ಯಾಷ್ ಟ್ಯಾಗ್ ಹಾಕಿ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಸಲಾಗಿತ್ತು.
ಅಭಿಯಾನ ಜೋರಾಗುತ್ತಿದ್ದಂತೆ ನಾನು ಭಾರತೀಯನಾಗಿ ಹುಟ್ಟಿದ್ದಕ್ಕೆ ಅದೃಷ್ಟ ಪಡುತ್ತೇನೆ. ನನ್ನ ಪರವಾಗಿ ಪ್ರಶಸ್ತಿ ನೀಡುವಂತೆ ಅಭಿಯಾನ ನಡೆಸಬೇಡಿ ಎಂದು ರತನ್ ಟಾಟಾ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.ಈ ವಿಚಾರ ತನ್ನ ಗಮನಕ್ಕೆ ಬರುತ್ತಿದ್ದಂತೆ ರತನ್ ಟಾಟಾ ಹೇಳಿಕೆ ಬಿಡುಗಡೆ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಒಂದು ವರ್ಗ ವ್ಯಕ್ತಪಡಿಸುತ್ತಿರುವ ಭಾವನೆಯನ್ನು ನಾನು ಗೌರವಿಸುತ್ತೇನೆ.
ರತನ್ ಟಾಟಾ ಸಿಕ್ಕಿದ ಪ್ರಶಸ್ತಿಗಳು :
ಪದಭೂಷಣ (ಭಾರತ ಸರ್ಕಾರದ 3ನೇ ಅತ್ಯುನ್ನತ ನಾಗರಿಕ ಗೌರವ (2000)
ಓರಿಯಂಟಲ್ ರಿಪಬ್ಲಿಕ್ ಆಫ್ ಉರುಗ್ವೆಯ ಪದಕ (ಉರುಗ್ವೆ ಸರ್ಕಾರ (2004)
ಇಂಟನ್ರ್ಯಾಷನಲ್ ಡಿಸ್ಟಿಂಗ್ವಿಶ್‌್ಡ ಅಚೀವೆಂಟ್ ಅವಾರ್ಡ್ (2005)
ಲಂಡನ್ ಸ್ಕೂಲ್ ಆಫ್ ಎಕನಾಮಿಕ್‌್ಸ ಅಂಡ್ ಪೊಲಿಟಿಕಲ್ ಸೈನ್‌್ಸ ಗೌರವ ಫೆಲೋಶಿಪ್ (2007)
ಪದವಿಭೂಷಣ (ಭಾರತ ಸರ್ಕಾರದ 2ನೇ ಅತ್ಯುನ್ನತ ನಾಗರಿಕ ಗೌರವ (2008)
ಇಟಾಲಿಯನ್ ರಿಪಬ್ಲಿಕ್ ಆರ್ಡರ್ ಆಫ್ ಮೆರಿಟ್ನ ಗ್ರ್ಯಾಂಡ್ ಆಫೀಸರ್ ಪ್ರಶಸ್ತಿ (ಇಟಲಿ ಸರ್ಕಾರ -2009)
ಗೌರವ ನೈಟ್ ಕಮಾಂಡರ್ ಆಫ್ ದಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್, ಯುಕೆ (2009)
ಓಸ್ಲೋ ಬಿಸಿನೆಸ್ ಫಾರ್ ಪೀಸ್ ಅವಾರ್ಡ್ (ಬಿಸಿನೆಸ್ ಫಾರ್ ಪೀಸ್ ಫೌಂಡೇಶನ್-2010)
ಬಾಲಿವುಡ್ ಚಿತ್ರ ನಿರ್ಮಿಸಿದ್ದ ರತನ್ ಟಾಟಾ
ಭಾರತದ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಹಲವು ಉದ್ಯಮಗಳಲ್ಲಿ ತಮಲ್ಲಿ ಗುರುತಿಸಿಕೊಂಡಂತೆ ಚಿತ್ರರಂಗ ದಲ್ಲೂ ಒಂದು ಹೆಜ್ಜೆ ಇಟ್ಟಿದ್ದರು.ಆದರೆ ಉದ್ಯಮಗಳಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದ ಟಾಟಾ ಅವರು ಆ ಚಿತ್ರದಿಂದ ಕೈಸುಟ್ಟುಕೊಂಡ ನಂತರ ಅವರು ಚಿತ್ರರಂಗದಿಂದ ಬಹುತೇಕ ದೂರವೇ ಉಳಿದರು.1992ರಲ್ಲಿ ಹಾಲಿವುಡ್‌ನಲ್ಲಿ ಬಿಡುಗಡೆಯಾಗಿದ್ದ ಫಿಯರ್’ ಚಿತ್ರದಿಂದ ಸ್ಫೂರ್ತಿ ಪಡೆದು ಬಾಲಿವುಡ್‌ನಲ್ಲಿಐತಬಾರ್’ ಎಂಬ ಚಿತ್ರವನ್ನು ನಿರ್ಮಿಸಿದ್ದರು.
2002ರಲ್ಲೇ 9.20 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ ಈ ಚಿತ್ರದಲ್ಲಿ ಬಿಗ್‌ಬಿ ಅಮಿತಾಬ್‌ಬಚ್ಚನ್, ಜಾನ್ ಅಬ್ರಾಹಂ, ಬಿಪಾಶಾಬಶುರಂತಹ ದೊಡ್ಡ ತಾರಾಗಣವೇ ಇದ್ದ ಈ ಚಿತ್ರ 2004ರಲ್ಲಿ ಬಿಡುಗಡೆಗೊಂಡು 7.50 ಕೋಟಿ ಗಳಿಸಿತ್ತು. ಈ ಸಿನಿಮಾಕ್ಕೆ ಜತಿನ್‌ಕುಮಾರ್, ಖುಷ್ಪುಬುದ್ರಾ, ಮನದೀಪ್‌ಸಿಂಗ್ ಅವರು ಕೂಡ ಪಾಲುದಾರರಾಗಿದ್ದರು.
