BlogLatestTop Storiesರಾಷ್ಟ್ರೀಯ-National

ಸಂವಿಧಾನಕ್ಕೆ 75 ವರ್ಷ : ಲೋಕಸಭೆಯಲ್ಲಿ ಪ್ರಧಾನಿ ಮೋದಿ ಮಹತ್ವದ ಭಾಷಣ, ಇಲ್ಲಿದೆ ಹೈಲೈಟ್ಸ್

ದೆಹಲಿ : ದೇಶ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷವಾದ ಹಿನ್ನಲೆಯಲ್ಲಿ ಸಂಸತ್​ನಲ್ಲಿ ಸಂವಿಧಾನದ ಕುರಿತು ಚರ್ಚೆ ನಡೆಯುತ್ತಿದ್ದು. ಪ್ರಧಾನಿ ನರೇಂದ್ರ ಮೋದಿಯವರು ಇಂದು ಸದನವನ್ನುದ್ದೇಶಿಸಿ ಮಾತನಾಡಿದರು.

ಭಾರತದ ಪ್ರಜಾಸತ್ತಾತ್ಮಕ ಇತಿಹಾಸವು ಜಗತ್ತಿಗೆ ಸ್ಫೂರ್ತಿಯಾಗಿದ್ದು, ವಿಶ್ವ ಪ್ರಜಾಪ್ರಭುತ್ವದ ತಾಯಿಯಾಗಿದೆ ಎಂದು ಪ್ರಧಾನಿ ಮೋದಿ ಅವರು ಸಂವಿಧಾನದ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿರು ವಿಶೇಷ ಚರ್ಚೆಯಲ್ಲಿ ತಿಳಿಸಿದರು. “ಸಂವಿಧಾನ ಎಂದರೆ ಕೋಟ್ಯಂತರ ಜನರ ಭಾವನೆಗೆ ಸಂಬಂಧಿಸಿದ್ದು, ಇದು ಭಾರತದ ಹೆಮ್ಮೆಯ ಕ್ಷಣವಾಗಿದೆ. ನಮ್ಮ ಸಂವಿಧಾನ ನಿರ್ಮಾತೃರಿಗೆ ಭಾರತದ ಚರಿತ್ರೆಯ ಬಗ್ಗೆ ತಿಳಿದಿತ್ತು.” ಎಂದು ಹೇಳಿದರು.

ಇಂದಿರಾ ಗಾಂಧಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇರಲಿಲ್ಲ:
ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ಕಾಂಗ್ರೆಸ್‌ ಹಿಂದೆ ಹೇರಿದ್ದ ತುರ್ತು ಪರಿಸ್ಥಿತಿಯ ಕಳಂಕವನ್ನು ಎಂದಿಗೂ ಅಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದ್ದಾರೆ. ನಾವು ಸಂವಿಧಾನದ 75 ವರ್ಷಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ಈ ವೇಳೆ ಹಿಂತಿರುಗಿ ನೋಡಿದರೆ, ಭಾರತದ ಸಂವಿಧಾನವು 25 ವರ್ಷಗಳನ್ನು ಪೂರೈಸಿದಾಗ, ತುರ್ತು ಪರಿಸ್ಥಿತಿಯನ್ನು ಬಳಸಿ ಅದನ್ನು ಕಿತ್ತುಕೊಂಡು ಭಾರತವನ್ನು ಜೈಲಿನಂತೆ ಮಾಡಲಾಯಿತು. ನಾಗರಿಕರ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಸಂವಿಧಾನದ ಬಗ್ಗೆ ಚರ್ಚೆ ನಡೆಯುವಾಗ ನಾವು ಯಾವಾಗಲೂ ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡುತ್ತೇವೆ. ಇದನ್ನು ಕಾಂಗ್ರೆಸ್‌ನಿಂದ ಅಳಿಸಲು ಸಾಧ್ಯವಿಲ್ಲ ಎಂದು ಅವರು ಕುಟುಕಿದ್ದಾರೆ.

ಇಂದಿರಾ ಗಾಂಧಿ ಅವರಿಗೆ ಸಂವಿಧಾನದಲ್ಲಿ ನಂಬಿಕೆ ಇರಲಿಲ್ಲ. ಇಂದಿರಾ ಗಾಂಧಿಯವರ ಆಯ್ಕೆಯನ್ನು ಅನೂರ್ಜಿತ ಎಂದು ಘೋಷಿಸಲಾಯಿತು. ಆ ನಂತರ ಅವರು ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಕೋಪದಿಂದ ತುರ್ತು ಪರಿಸ್ಥಿತಿಯನ್ನು ಹೇರಿದರು. ಅವರು ಸಂವಿಧಾನವನ್ನು ದುರುಪಯೋಗಪಡಿಸಿಕೊಂಡರು ಎಂದು ವಾಗ್ದಾಳಿ ನಡೆಸಿದ್ದಾರೆ.

ತುರ್ತು ಪರಿಸ್ಥಿತಿ :
ತುರ್ತು ಪರಿಸ್ಥಿತಿಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ‘ ಕಾಂಗ್ರೆಸ್​ ಸರ್ಕಾರ ಎಮರ್ಜೆನ್ಸಿ ಘೋಷಿಸಿ ಸಂವಿಧಾನ ನಿರ್ಮಾತೃಗಳ ಕನಸನ್ನು ಮಣ್ಣುಪಾಲು ಮಾಡಿದೆ. ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಕಾಂಗ್ರೆಸ್ ಹಾಳು ಮಾಡಿದೆ. ಇದರೊಂದಿಗೆ ಎಮರ್ಜೆನ್ಸಿ ವೇಳೆ ಜನರ ಹಕ್ಕನ್ನು ಕಸಿದುಕೊಳ್ಳಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

75 ಬಾರಿ ಸಂವಿಧಾನ ಬದಲಾವಣೆ :
55 ವರ್ಷ ಒಂದೇ ಕುಟುಂಬ ಭಾರತದಲ್ಲಿ ಆಡಳಿತ ನಡೆಸಿದೆ. ಪ್ರತಿ ಹಂತದಲ್ಲಿ ಈ ಕುಟುಂಬ ಸಂವಿಧಾನ ಮುಗಿಸಲು ಯತ್ನಿಸಿದೆ. ಸಂವಿಧಾನವನ್ನು ಬದಲಾಯಿಸುವುದು ಕಾಂಗ್ರೆಸ್‌ಗೆ ನಂತರ ಅಭ್ಯಾಸವಾಯಿತು. ಕಾಂಗ್ರೆಸ್ ಹಂತ ಹಂತವಾಗಿ ಸಂವಿಧಾನವನ್ನು ಬೇಟೆಯಾಡುತ್ತಾ ಬಂದಿದೆ. ಕಾಂಗ್ರೆಸ್‌ 75 ಬಾರಿ ಸಂವಿಧಾನ ಬದಲಾವಣೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದರು. ಸಂವಿಧಾನ ನಮ್ಮ ರಸ್ತೆಗೆ ಅಡ್ಡವಾದರೆ ಸಂವಿಧಾನದ ತಿದ್ದುಪಡಿ ಮಾಡಬೇಕು ಎಂದು ಮುಖ್ಯಮಂತ್ರಿಗಳಿಗೆ ನೆಹರು ಪತ್ರ ಬರೆದಿದ್ದರು. ಮೊದಲ ಪ್ರಧಾನಿ ಪಾಪ ಮಾಡಿ ಹೋಗಿದ್ದರು. ನಂತರ ಬಂದವರು ಅದನ್ನೇ ಮುಂದುವರಿಸಿದರು ಎಂದು ಹೇಳುವ ಮೂಲಕ ಗಾಂಧಿ ಕುಟುಂಬವನ್ನು ಕುಟುಕಿದರು.

ಸಂವಿಧಾನದ ಮೇಲೆ ಗಾಂಧಿ ಕುಟುಂಬದ ದಾಳಿ :
ನೆಹರು ಅವರಿಂದ ಆರಂಭಿಸಿ ರಾಹುಲ್‌ ಗಾಂಧಿಯವರೆಗೆ ಗಾಂಧಿ ಕುಟುಂಬ ಹೇಗೆ ಸಂವಿಧಾನವನ್ನು ದುರ್ಬಳಕೆ ಮಾಡಿದೆ ಎಂಬುದನ್ನು 1 ಗಂಟೆ 47 ನಿಮಿಷಗಳ ಭಾಷಣದಲ್ಲಿ ವಿವರಿಸಿ ಮೋದಿ ಆಕ್ರೋಶ ಹೊರ ಹಾಕಿದರು.

ಕಾಂಗ್ರೆಸ್‌ನ ಒಂದು ಕುಟುಂಬ ಸಂವಿಧಾನಕ್ಕೆ ಹಾನಿ ಮಾಡಲು ಯಾವುದೇ ಅವಕಾಶ ಬಿಟ್ಟಿಲ್ಲ. 55 ವರ್ಷ ಒಂದೇ ಕುಟುಂಬ ಆಡಳಿತ ನಡೆಸಿದೆ. ಈ ಕುಟುಂಬ ವಿಚಾರ, ನೀತಿ ರೀತಿ ನಿರಂತರವಾಗಿ ನಡೆಯುತ್ತಿದೆ. ಈ ಕುಟುಂಬ ಪ್ರತಿ ಹಂತದಲ್ಲಿ ಸಂವಿಧಾನವನ್ನು ಮುಗಿಸಲು ಯತ್ನಿಸಿದೆ. 1947-52ವರೆಗೆ ಚುನಾಯಿತ ಸರ್ಕಾರ ಇರಲಿಲ್ಲ. ಸೆಲೆಕ್ಟೆಡ್ ಸರ್ಕಾರ ಇತ್ತು. ರಾಜ್ಯಸಭೆ, ರಾಜ್ಯ ಸರ್ಕಾರ ಇರಲಿಲ್ಲ. ಚುನಾವಣಾಯಿತ ಸರ್ಕಾರ ಇಲ್ಲದಿದ್ದಾಗ ಸಂವಿಧಾನ ತಿದ್ದುಪಡಿ ಮಾಡುವ ಕೆಲಸ ಮಾಡಲಾಯಿತು. ಸಂವಿಧಾನ ನಿರ್ಮಾತೃಗಳಿಗೆ ಅವಮಾನಿಸುವ ಕೆಲಸ ಮಾಡಲಾಯಿತು.

ಸಂವಿಧಾನ ನಮ್ಮ ರಸ್ತೆಗೆ ಅಡ್ಡಲಾಗಿ ಬಂದರೆ ಸಂವಿಧಾನದ ತಿದ್ದುಪಡಿ ಮಾಡಬೇಕು ಎಂದು ನೆಹರು ಸಿಎಂಗಳಿಗೆ ಪತ್ರ ಬರೆದಿದ್ದರು. ನೆಹರು ಅವರು ನಿರ್ಧಾರಕ್ಕೆ ಸಾಕಷ್ಟು ಆಕ್ಷೇಪಗಳು ಬಂದರೂ ಲೆಕ್ಕಸದೇ ತಮ್ಮದೇ ಸಂವಿಧಾನ ನಡೆಸಿದರು. ಕಾಂಗ್ರೆಸ್ ಹಂತ ಹಂತವಾಗಿ ಸಂವಿಧಾನವನ್ನು ಬೇಟೆಯಾಡಿದೆ. ಮೊದಲ ಪ್ರಧಾನಿ ಪಾಪ ಮಾಡಿ ಹೋಗಿದ್ದರು. ನಂತರ ಬಂದವರು ಅದೇ ಸಂಪ್ರದಾಯವನ್ನು ಮುಂದುವರಿಸಿದರು.

ನ್ಯಾಯಾಂಗದ ರೆಕ್ಕ ಕತ್ತರಿಸುವ ಕೆಲಸ ಇಂದಿರಾಗಾಂಧಿ ಮಾಡಿದ್ದರು. ತುರ್ತು ಪರಿಸ್ಥಿತಿ ಹೇರುವ ಮೂಲಕ ನ್ಯಾಯಾಂಗದ ಹಕ್ಕುಗಳನ್ನು ಇಂದಿರಾಗಾಂಧಿ ಕಿತ್ತುಕೊಂಡಿದ್ದರು. ನ್ಯಾಯಾಂಗದ ಮೇಲೆ ನಿಯಂತ್ರಣ ಮಾಡಲು ಅಧಿಕಾರ ಮಾಡಿಕೊಂಡಿದ್ದರು.ಕೋರ್ಟ್ ಅವರ ಆಯ್ಕೆಯನ್ನು ರದ್ದು ಮಾಡಿತ್ತು. ಅದಕ್ಕೆ ಸಿಟ್ಟಿನಿಂದ ಇಂದಿರಾಗಾಂಧಿ ಕುರ್ಚಿ ಉಳಿಸಿಕೊಳ್ಳಲು ತುರ್ತು ಪರಿಸ್ಥಿತಿ ಹೇರಿದರು. 1975 ರಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ, ಪ್ರಧಾನಮಂತ್ರಿ, ಅಧ್ಯಕ್ಷ ಇವರ ಚುನಾವಣೆ ವಿರುದ್ಧ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಾಗದ ತಿದ್ದುಪಡಿ ಮಾಡಿದರು.

ರಾಜೀವ್ ಗಾಂಧಿ ಪ್ರಧಾನಮಂತ್ರಿಯಾದ ಬಳಿಕ ಸಂವಿಧಾನಕ್ಕೆ ಮತ್ತೊಂದು ಹಾನಿ ಮಾಡಿದರು. ಎಲ್ಲರಿಗೂ ಸಮಾನತೆ, ಎಲ್ಲರಿಗೂ ನ್ಯಾಯಕ್ಕೆ ಧಕ್ಕೆ ಮಾಡಿದರು. ಶಹಬಾನು ಪ್ರಕರಣದಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಆದರೆ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಕೋರ್ಟ್ ಆದೇಶವನ್ನು ಮೆಟ್ಟಿನಿಂತರು. ಕೋರ್ಟ್ ಆದೇಶ ಬದಲಿಸಲು ಸಂವಿಧಾನ ತಿದ್ದುಪಡಿ ಮಾಡಿದರು. ವೋಟು ಬ್ಯಾಂಕ್‌ಗಾಗಿ, ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ಮಹಿಳೆಯ ಹಕ್ಕು ಕಸಿಯಲಾಯಿತು.

ಮಹಿಳೆಯರೇ ಕೇಂದ್ರಬಿಂದು :
ಭಾರತ ಪ್ರತಿ ಪ್ರಮುಖ ನೀತಿ ನಿರ್ಧಾರದ ಕೇಂದ್ರಬಿಂದು ಮಹಿಳೆಯರೇ ಆಗಿದ್ದು, ಭಾರತ ಜಿ20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದ ಸಂದರ್ಭ ವಿಶ್ವದ ಎದುರು ಮಹಿಳಾ ಅಭಿವೃದ್ಧಿ ಬಗ್ಗೆ ಮಾತನಾಡಲಾಗಿದ್ದು, ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಕೊಡುಗೆ ಮತ್ತು ಅವರು ಪ್ರತಿನಿಧಿತ್ವ ದೇಶಕ್ಕೆ ಗೌರವ ತರುವಂತದ್ದು. ವಿಜ್ಞಾನ ಕ್ಷೇತ್ರದಲ್ಲೂ ಮಹಿಳೆಯರ ಕೊಡುಗೆ ಭಾರತೀಯರು ಹೆಮ್ಮೆ ಪಡುವಂತದ್ದು. ಇನ್ನು ಮಹಿಳೆಯರಿಗೆ ಅಧಿಕಾರ ನೀಡುವಲ್ಲಿ ಸಂವಿಧಾನದ ಪಾತ್ರ ಮಹತ್ವದ್ದು. ನಮ್ಮ ಸರ್ಕಾರದಲ್ಲಿ ನಾರಿ ಶಕ್ತಿ ಬಂಧನ್ ಅಧಿನಿಯಮ್ ಜಾರಿ ಮಾಡಲಾಗಿದ್ದು, ನಮ್ಮ ಮಹಿಳೆಯರ ಶಕ್ತಿಯನ್ನು ಭಾರತದ ರಾಜಕೀಯದಲ್ಲಿ ಬಳಸಿಕೊಳ್ಳಲು ಜಾರಿ ಮಾಡಲಾಯ್ತು. ಇದರಿಂದ ನಮ್ಮ ಮಹಿಳಾ ಸಂಸದೆಯರ ಸಂಖ್ಯೆ, ಅವರ ಕೊಡುಗೆ ಜಾಸ್ತಿಯಾಗಿದ್ದು, ಇವರೆಲ್ಲರ ಕೊಡುಗೆಯಿಂದ 2047ರಲ್ಲಿ ಭಾರತ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಲಿದೆ ಎಂದರು.

Share with Friends
author avatar
News Desk