LatestTop Storiesರಾಜ್ಯ-Karnataka

ಹೆಚ್ಎಂಟಿಗೆ ಭರ್ಜರಿ ಬಿಸಿನೆಸ್ ; ಒಂದೇ ದಿನ ₹35 ಲಕ್ಷಕ್ಕೂ ಹೆಚ್ಚು ವಹಿವಾಟು..!

ಹಾಸನ- ಆ.17, 2026 : ಸ್ವಾತಂತ್ರ್ಯ ದಿನಾಚರಣೆಯಂದು ಹೆಚ್ಎಂಟಿ ಕೈಗಡಿಯಾರಗಳಿಗೆ ಭರ್ಜರಿ ಬೇಡಿಕೆ ವ್ಯಕ್ತವಾಗಿದ್ದು, ಒಂದೇ ದಿನ ₹35 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ವಾತಂತ್ರ್ಯ ದಿನದ ಪ್ರಯುಕ್ತ ಹೆಚ್ಎಂಟಿ ಕಂಪನಿಯು ವಿಶೇಷ ಆವೃತ್ತಿಯ ಅಪರೂಪದ ಕೈಗಡಿಯಾರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಗಡಿಯಾರಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದು, ಸುಮಾರು ಎರಡೂವರೆ ಕಿಲೋಮೀಟರ್‌ಗೂ ಹೆಚ್ಚು ದೂರ ಸಾಲಿನಲ್ಲಿ ನಿಂತು ಖರೀದಿ ಮಾಡಿದ್ದರು. ಇದನ್ನು ಕಂಡು ತಾನು ಆಶ್ಚರ್ಯಚಕಿತನಾಗಿದ್ದೆ ಎಂದು ಹೇಳಿದರು.

ಅಂದು ಸಾವಿರಾರು ಕೈಗಡಿಯಾರಗಳು ಮಾರಾಟವಾಗಿದ್ದು, ಒಂದೇ ದಿನ ₹35 ಲಕ್ಷಕ್ಕೂ ಹೆಚ್ಚು ವಹಿವಾಟು ನಡೆದಿರುವುದು ಹೆಚ್ಎಂಟಿ ಕಂಪನಿಯನ್ನು ಪುನಶ್ಚೇತನಗೊಳಿಸುವ ಕೇಂದ್ರ ಸರ್ಕಾರದ ಉದ್ದೇಶಕ್ಕೆ ಮತ್ತಷ್ಟು ಬಲ ನೀಡಿದೆ ಎಂದು ಕುಮಾರಸ್ವಾಮಿ ಹೇಳಿದರು.

ಹೆಚ್ಎಂಟಿ ಗಡಿಯಾರಗಳ ಬಗ್ಗೆ ಜನರಲ್ಲಿ ಇಂದಿಗೂ ಅಭಿಮಾನ ಮತ್ತು ಗೌರವವಿದೆ. ಹಿಂದೆ ಹೆಚ್ಎಂಟಿ ಗಡಿಯಾರ ಧರಿಸುವುದು ಹೆಮ್ಮೆ ಮತ್ತು ಪ್ರತಿಷ್ಠೆಯ ಸಂಗತಿಯಾಗಿತ್ತು. ಆ ವೈಭವವನ್ನು ಮರಳಿ ತರುವುದು ನಮ್ಮ ಉದ್ದೇಶವಾಗಿದ್ದು, ಅದಕ್ಕಾಗಿ ಗಂಭೀರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದರು.

ಕಾರ್ಖಾನೆಗೆ ಮರುಜೀವ ನೀಡುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ನೀತಿ ಆಯೋಗದ ಸದಸ್ಯ ವಿ.ಕೆ. ಸಾರಸ್ವತ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿ ಈಗಾಗಲೇ ವರದಿ ಸಲ್ಲಿಸಿ ಹಲವು ಮಹತ್ವದ ಶಿಫಾರಸುಗಳನ್ನು ಮಾಡಿದೆ. ಅದರಂತೆ ಹೆಚ್ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೂ ಮಾತುಕತೆ ನಡೆಸಿರುವುದಾಗಿ ಸಚಿವರು ತಿಳಿಸಿದರು.

ಯುವಕರಿಗೆ ಸಚಿವರ ಕೃತಜ್ಞತೆ

ಸ್ವಾತಂತ್ರ್ಯ ದಿನದ ವಿಶೇಷ ಆವೃತ್ತಿಯ ಗಡಿಯಾರಗಳನ್ನು ದೊಡ್ಡ ಪ್ರಮಾಣದಲ್ಲಿ ಯುವಕರು ಖರೀದಿಸಿದ್ದಾರೆ. ವಯಸ್ಸಿನ ಭೇದವಿಲ್ಲದೆ ಹಿರಿಯರು, ಕಿರಿಯರು ಹಾಗೂ ಮಕ್ಕಳು ಕೂಡ ಸಾಲಿನಲ್ಲಿ ನಿಂತು ಗಡಿಯಾರಗಳನ್ನು ಖರೀದಿಸಿದ್ದಾರೆ.

ಹೆಚ್ಎಂಟಿ ಮೇಲಿನ ಜನರ, ಅದರಲ್ಲೂ ಯುವಜನತೆಯ ಅಭಿಮಾನಕ್ಕೆ ಸಚಿವ ಕುಮಾರಸ್ವಾಮಿ ಧನ್ಯವಾದ ಸಲ್ಲಿಸಿದರು. ಇದೇ ರೀತಿಯ ಬೆಂಬಲ ಮುಂದುವರಿಯಲಿ ಎಂದು ಅವರು ಮನವಿ ಮಾಡಿದರು.

Share with Friends
author avatar
News Desk