Latestರಾಜಕೀಯ | Politics

ಧ್ವಜಾರೋಹಣ ವಿವಾದ : ಬಿಜೆಪಿ ವಿರುದ್ಧ ಸಚಿವ ಜಮೀರ್ ಅಹ್ಮದ್ ಗರಂ

ಬೆಂಗಳೂರು: ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣದಿಂದ ವಿನಾಯ್ತಿ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದ ವಿಚಾರಕ್ಕೆ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿದ್ದಾರೆ.

ಧ್ವಜಾರೋಹಣ ಮಾಡುವುದು ಸೌಭಾಗ್ಯ. ಸಚಿವರಾದ ಬಳಿಕ ಧ್ವಜಾರೋಹಣ ಮಾಡಬೇಕು ಎಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಕೆಲಸದ ಒತ್ತಡದ ಹಿನ್ನೆಲೆಯಲ್ಲಿ ಬೇರೆಯವರಿಗೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೆ ಎಂದು ಜಮೀರ್ ಅಹ್ಮದ್ ಹೇಳಿದ್ದಾರೆ.

ಹಾವೇರಿ ಜಿಲ್ಲಾ ಉಸ್ತುವಾರಿಯಾಗಿದ್ದಾಗಲೂ ಧ್ವಜಾರೋಹಣ ಮಾಡಲು ಅವಕಾಶ ಸಿಕ್ಕಿತ್ತು. ಎರಡು ವರ್ಷ ಬಳ್ಳಾರಿ ಜಿಲ್ಲಾ ಉಸ್ತುವಾರಿಯಾಗಿದ್ದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಜಿಲ್ಲಾ ಉಸ್ತುವಾರಿ ಬೇಡ ಎಂದು ಪತ್ರ ಬರೆದಿದ್ದೆ. ಜಿಲ್ಲೆಗೆ ಸಮಯ ಕೊಡಬೇಕು, ಆದರೆ ಸಮಯದ ಕೊರತೆಯಿಂದ ಉಸ್ತುವಾರಿ ಬೇಡ ಎಂದು ಕೇಳಿಕೊಂಡಿದ್ದೆ ಎಂದರು.

ಬಸಂತಪ್ಪ ಅವರಿಗೆ ಧ್ವಜಾರೋಹಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದೆ. ದೇಶದ ಅಭಿಮಾನವನ್ನು ಬಿಜೆಪಿಯವರಿಂದ ಕಲಿಯಬೇಕಿಲ್ಲ. ಸ್ವಾತಂತ್ರ್ಯ ಯಾರಿಂದ ಬಂದಿದೆ ಎಂಬುದು ದೇಶಕ್ಕೆ ಗೊತ್ತಿದೆ. ಅವರಿಂದ ನಾನು ದೇಶಾಭಿಮಾನ ಕಲಿಯಬೇಕಿಲ್ಲ ಎಂದು ಬಿಜೆಪಿ ವಿರುದ್ಧ ಜಮೀರ್ ಅಹ್ಮದ್ ತೀವ್ರ ವಾಗ್ದಾಳಿ ನಡೆಸಿದರು.

ನಾನು ಹಿಂದೂಸ್ತಾನಿ, ಕನ್ನಡಿಗ. ದೇಶದ್ರೋಹಿಗಳು ಯಾರು ಎಂಬುದು ಗೊತ್ತಿದೆ ಎಂದು ಜಮೀರ್ ಅಹ್ಮದ್ ತಿರುಗೇಟು ನೀಡಿದ್ದಾರೆ.

2006ರ ಕುಮಾರಸ್ವಾಮಿ ಸರ್ಕಾರದಲ್ಲೇ ನಾನು ಸಚಿವನಾಗಿದ್ದೆ. ಮಂತ್ರಿಯಾದ ಬಳಿಕ ಧ್ವಜಾರೋಹಣ ಮಾಡಬೇಕು ಎಂಬ ಆಸೆ ಇರುತ್ತದೆ. ಆದರೆ ಜಿಲ್ಲೆಗೆ ಸಮಯ ನೀಡುವ ಉದ್ದೇಶದಿಂದಲೇ ಜಿಲ್ಲಾ ಉಸ್ತುವಾರಿ ಬೇಡ ಎಂದು ಮನವಿ ಮಾಡಿದ್ದೆ ಎಂದು ಸ್ಪಷ್ಟಪಡಿಸಿದರು.

Share with Friends
author avatar
News Desk